ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವಧಿ ಮತ್ತೆ ವಿಸ್ತರಣೆ

Spread the love

ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವಧಿ ಮತ್ತೆ ವಿಸ್ತರಣೆ

ಬೆಂಗಳೂರು: ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ. ಒಂದು ತಿಂಗಳ ಕಾಲ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಒಂದು ತಿಂಗಳ ಕಾಲ ಅಂದರೆ ಫೆಬ್ರವರಿ 29ರ ವರೆಗೆ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಕಾತರಾಜ್ ಅವರ ಜಾತಿ ಗಣತಿ ವರದಿ ಸ್ವೀಕರಿಸುವುದು ಖಚಿತವಾದಂತಾಗಿದ್ದು, ಮೂಲಗಳ ಪ್ರಕಾರ ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿಯು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಂದಿದೆ.

ಕಳೆದ 2023ರ ನವೆಂಬರ್ನಲ್ಲಿ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಎರಡು ತಿಂಗಳವರೆಗೆ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರನ್ವಯ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮುಂದುವರಿಸಲಾಗಿತ್ತು. ಈಗ ಜನವರಿ 31ಕ್ಕೆ ಅವಧಿ ಮುಕ್ತಾಯವಾಗುತ್ತಲಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಜಾತಿ ಗಣತಿ ವರದಿಯನ್ನು ಅಂತಿಮಗೊಳಿಸುವ ಸಂಬಂಧ ಫೆ. 15ರವರೆಗೆ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗವು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

ಈ ಬಗ್ಗೆ ಮಾತನಾಡಿರುವ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಶ್ವತ ಹಿಂದುಳಿದ ವರ್ಗದ ಆಯೋಗ ಅಧ್ಯಕ್ಷರ ಅವಧಿಯನ್ನು ವಿಸ್ತರಣೆ ಮಾಡಿದ್ದೇವೆ. ಇವತ್ತು ಸಹಿ ಮಾಡಿ ಕಳಿಸಿದ್ದೇವೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಫೆಬ್ರವರಿ 29ರ ತನಕ ಅವಧಿ ವಿಸ್ತರಣೆ ಸಂಬಂಧ ಮನವಿ ಮಾಡಿದ್ದರು. ಹೀಗಾಗಿ ಕ್ರಮ ಕೈಗೊಂಡಿದ್ದೇವೆ. ಆಯೋಗದ ಅಧ್ಯಕ್ಷರು ಸಮಯ ಕೇಳಿದ ಮೇಲೆ ಕೊಡಬೇಕಲ್ಲವೇ? ಎಂದಿದ್ದಾರೆ.


Spread the love