ಹಿರಿಯಡ್ಕ | ಪೊಲೀಸರಿಗೆ ಮಾಹಿತಿ ನೀಡದೆ ಶರಣ್ ಪಂಪ್‌ವೆಲ್‌ಗೆ ಆಹ್ವಾನ: ಬಜರಂಗದಳದ ಮುಖಂಡರ ವಿರುದ್ಧ ಪ್ರಕರಣ
ಹಿರಿಯಡ್ಕ: ಪೊಲೀಸರಿಗೆ ಮಾಹಿತಿ ನೀಡದೆ ಕೋಮು ಸೌಹಾರ್ದತೆಗೆ ಧಕ್ಕೆ ಆಗುವಂತಹ ಪ್ರಚೋದನಾಕಾರಿ ಭಾಷಣ ಪ್ರಕರಣದ ಆರೋಪಿ ಶರಣ್ ಪಂಪ್‌ವೆಲ್‌ನನ್ನು ಕಾರ್ಯಕ್ರಮಕ್ಕೆ ಕರೆಸಿರುವ ಆರೋಪದಲ್ಲಿ ಬಜರಂಗದಳದ ಮುಖಂಡರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಜರಂಗ ದಳ ಹಿರಿಯಡ್ಕ ಘಟಕದ ಪ್ರಮುಖರು ಆ.20ರಂದು ಸಂಜೆ 6ಗಂಟೆಗೆ ಹಿರಿಯಡ್ಕ ಕೋಟ್ನಕಟ್ಟೆಯಿಂದ ದೇವಾಡಿಗ ಸಭಾಭವನದವರೆಗೆ ಪಂಜಿನ ಮೆರವಣಿಗೆ ಮಾಡಿ, ದೇವಾಡಿಗರ ಸಭಾಭವನದಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಅಯೋಜಕರು ನಿಗಧಿಪಡಿಸಿದ ಸ್ಥಳದಿಂದ 6ಗಂಟೆಗೆ ಪಂಜಿನ ಮೆರವಣಿಗೆ ಪ್ರಾರಂಭಿಸದೆ ವಿಳಂಬವಾಗಿ 7:30ಕ್ಕೆ ಪಂಜಿನ ಮೆರವಣಿಗೆ ಹೊರಟು ದೇವಾಡಿಗ ಸಭಾ ಭವನಕ್ಕೆ ಬಂದು ಸಭಾ ಕಾರ್ಯ ಕ್ರಮವನ್ನು ನಡೆಸಿದ್ದಾರೆ ಎಂದು ದೂರಲಾಗಿದೆ. ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ನೀಡಿದ ಅನುಮತಿಯಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಪ್ರಚೋದನಾಕಾರಿ ಭಾಷಣ ಮಾಡಬಾರದು ಎಂದು ತಿಳಿಸಲಾಗಿತ್ತು.
ದಿನೇಶ್ ಮೆಂಡನ್ ಮತ್ತು ಅವರ ಸಂಗಡಿಗರು ಕೋಮು ಸೌಹಾರ್ದತೆಗೆ ಧಕ್ಕೆ ಆಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಶರಣ್ ಪಂಪ್‌ವೆಲ್ ಮಂಗಳೂರು ಅವರನ್ನು ಕರೆಸಿ, ಅವರಿಗೆ ವೇದಿಕೆಯಲ್ಲಿ ಅನುವು ಮಾಡಿಕೊಟ್ಟಿದ್ದಾರೆ. ಕಾರ್ಯಕ್ರಮ ರಾತ್ರಿ 9ರಿಂದ 10ಗಂಟೆಯವರೆಗೆ ನಡೆಸಿದ್ದು ಕಾರ್ಯಕ್ರಮ ಆಯೋಜಿಸಿದ ಬಜರಂಗದಳದ ಮುಖಂಡರಾದ ದಿನೇಶ್ ಮೆಂಡನ್ ಹಾಗೂ ಸುಬ್ರಹ್ಮಣ್ಯ ಭಟ್, ಶರಣ್ ಪಂಪ್‌ವೆಲ್ ಕಾರ್ಯಕ್ರಮಕ್ಕೆ ಭಾಗಿಯಾಗುವ ಬಗ್ಗೆ ಠಾಣೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ದೂರಲಾಗಿದೆ.