ಹುಳಿಮಾವು ಕೆರೆ ಕಟ್ಟೆ ಒಡೆದು, ಲೇಔಟಿಗೆ ನೀರು, ಆತಂಕದಲ್ಲಿ ಜನತೆ

Spread the love

ಹುಳಿಮಾವು ಕೆರೆ ಕಟ್ಟೆ ಒಡೆದು, ಲೇಔಟಿಗೆ ನೀರು, ಆತಂಕದಲ್ಲಿ ಜನತೆ

ಬೆಂಗಳೂರು: ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಏರಿ ಒಡೆದು, ಸುತ್ತಮುತ್ತಲಿನ ಬಡಾವಣೆಗಳಿಗೆ ನೀರು ನುಗ್ಗಿದ ಘಟನೆ ರವಿವಾರ ನಡೆದಿದೆ.

ಇಲ್ಲಿನ ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್‌ನಲ್ಲಿರುವ ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್ ಅಪಾರ್ಟ್‌ಮೆಂಟ್ ಸಮುಚ್ಚಯದ ಆಸುಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಸಮೀಪದ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದ ಪರಿಣಾಮ ಸುಮಾರು ಎರಡು ಸಾವಿರ ಮನೆಗಳು ಜಲಾವೃತವಾಗಿವೆ ಎಂದು ವರದಿಯಾಗಿದೆ.

ಹುಳಿಮಾವು ಕೆರೆ ಒಟ್ಟು 140 ಎಕರೆ ಇದ್ದು, ನೀರು ಸಹ ಹೆಚ್ಚಿನ ಪ್ರಮಾಣದಲ್ಲಿತ್ತು. ರವಿವಾರ ಇದ್ದಕ್ಕಿದ್ದಂತೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಪರದಾಡುವಂತಾಗಿದೆ. ಇಲ್ಲಿನ ನ್ಯೂನೋ ಆಸ್ಪತ್ರೆ, ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್‌ಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೆ, ಕಾರು, ದ್ವಿಚಕ್ರ ವಾಹನಗಳು ಓಡಾಡದಂತಹ ಪರಿಸ್ಥಿತಿ ರಸ್ತೆಗಳಲ್ಲಿ ನಿರ್ಮಾಣವಾಗಿದ್ದರೆ, ಮನೆಯೊಳಗೆ ನೀರು ನುಗ್ಗಿದ್ದರಿಂದ ಅಡುಗೆ, ದಿನಸಿ ಸಾಮಾನು ನೀರಿನಲ್ಲಿ ಕೊಚ್ಚಿಹೋಗಿರುವ ದೃಶ್ಯ ಕಂಡಿತು.

ಈ ಬಾರಿ ನಗರದಲ್ಲಿ ಭಾರಿ ಮಳೆಯಾದ್ದರಿಂದ ಹುಳಿಮಾವು ಕೆರೆ ಭರ್ತಿಯಾಗಿತ್ತು. ಕಳೆದ ವರ್ಷಕ್ಕಿಂತ ಅಧಿಕ ನೀರು ಶೇಖರಣೆಯಾಗಿತ್ತು. ಬಿಡಿಎ ಸುಪರ್ದಿಯಲ್ಲಿರುವ ಕೆರೆಯನ್ನು ದುರಸ್ತಿ ಮಾಡಿ ಅಭಿವೃದ್ದಿ ಪಡಿಸುವ ಸಲುವಾಗಿ ನೀರು ಖಾಲಿ ಮಾಡುವ ಕೆಲಸ ಆರಂಭವಾಗಿತ್ತು. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ರಭಸದಲ್ಲಿ ನೀರು ಹರಿದಿದ್ದರಿಂದ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಕೆಲಸಗಾರರು ಅರ್ಧದಲ್ಲಿ ಕೆಲಸ ನಿಲ್ಲಿಸಿ ಜಾಗ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.


Spread the love