ಹೊಸ ವರ್ಷಾಚರಣೆ; ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಕಟ್ಟುನಿಟ್ಟಿನ ಸೂಚನೆ

Spread the love

ಹೊಸ ವರ್ಷಾಚರಣೆ; ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಕಟ್ಟುನಿಟ್ಟಿನ ಸೂಚನೆ

ಮಂಗಳೂರು : ಹೊಸ ವರ್ಷಾಚರಣೆ ಮಾಡುವವರಿಗೆ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಅವರು ಕೆಲವೊಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿ ದ್ದಾರೆ.

ಹೊಟೇಲ್ ರೆಸಾರ್ಟ್, ಸಂಘಗಳು ಸೇರಿದಂತೆ ವರ್ಷಾಚರಣೆ ಕೂಟಗಳನ್ನು ನಡೆಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಸಂಪೂರ್ಣವಾದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಲಿಖಿತ ಪರವಾನಿಗೆ ಪಡೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ನಗರಾದ್ಯಂತ ಎಲ್ಲಾ ಕಾರ್ಯಕ್ರಮಗಳು ಮಧ್ಯರಾತ್ರಿ 12.05ಕ್ಕೆ ಕೊನೆಗೊಳ್ಳಬೇಕು. 15 ನಿಮಿಷಗಳ ಸ್ಥಳ ತೆರವುಗೊಳಿಸಲು ಸಮಯ ನೀಡಲಾಗುತ್ತದೆ. ಹೊಸ ವರ್ಷಾಚರಣೆಗೆ ಅಬಕಾರಿ ಸೇರಿದಂತೆ ಇತರ ಕೆಲವು ಇಲಾಖೆಗಳೂ ಪರವಾನಿಗೆ ನೀಡುತ್ತವೆ. ಆ ಎಲ್ಲಾ ಇಲಾಖೆಗಳಿಂದ ಸೂಕ್ತವಾದ ಪರವಾನಿಗೆ ಪಡೆಯಬೇಕಾಗುತ್ತದೆ. ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಸಾರ್ವಜನಿಕ ಹಣ ಸಂಗ್ರಹಿಸಿ ಕಾರ್ಯಕ್ರಮ ಮಾಡುವವರು ತಮ್ಮ ಕಟ್ಟಡದ ಸುರಕ್ಷತೆಗಾಗಿ ಅಗ್ನಿಶಾಮಕ ವ್ಯವಸ್ಥೆ ಮಾಡಬೇಕಾಗುತ್ತದೆ. ಆಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು.

ಮದ್ಯಪಾನ ಸರಬರಾಜು ನಿಗದಿತ ಅವಧಿಗಿಂತ ಹೆಚ್ಚು ಮಾಡುವುದಿದ್ದಲ್ಲಿ ಸ್ಪಷ್ಟವಾದ ಅಬಕಾರಿ ಆದೇಶ ಅಗತ್ಯ. ಅಬಕಾರಿ ಸುಮಾರು 11 ಗಂಟೆಯವರೆಗೆ ಸರಬರಾಜಿಗೆ ಅವಕಾಶ ನೀಡುತ್ತದೆ. ಪೊಲೀಸ್ ಇಲಾಖೆಯಿಂದ ಕಾರ್ಯಕ್ರಮಕ್ಕೆ 12.05ರವರೆಗೆ ಅವಕಾಶ ನೀಡುತ್ತದೆ. ಅಷ್ಟು ಹೊತ್ತಿನವರೆಗೂ ಮದ್ಯಪಾನ ಸರಬರಾಜಿಗೆ ಅಬಕಾರಿ ಅನುಮತಿಯನ್ನು ಪಡೆಯಬೇಕಾಗುತ್ತದೆ.

ವರ್ಷಾಚರಣೆಯಲ್ಲಿ ಮಹಿಳೆಯರ ಸುರಕ್ಷತೆಗೆ ಅತೀ ಪ್ರಾಮುಖ್ಯವಾದುದು. ಮಹಿಳಾ ಸುರಕ್ಷತೆಗೆ ಭಂಗ ಆದಲ್ಲಿ ಪೊಲೀಸ್ ಇಲಾಖೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಲ್ಲಿ ಕಡ್ಡಾಯವಾಗಿ ಮಹಿಳಾ ಸುರಕ್ಷತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅಲ್ಲಿರುವ ಪ್ರತಿಯೊಂದು ಸಿಬ್ಬಂದಿಗೂ ಸೌಜನ್ಯಯುತವಾಗಿ ನಡೆದುಕೊಳ್ಳಲು ತಿಳಿಸಬೇಕು. ಮಹಿಳೆಯರೊಂದಿಗೆ ದುರ್ವತನೆ ಮಾಡದಂತೆ ಕ್ರಮ ವಹಿಸಬೇಕು. ಸಿಸಿಕ್ಯಾಮೆರಾ ಅಳವಡಿಸಬೇಕು. ನಾವು ಕೇಳಿದಾಗ ಇಲಾಖೆಗೆ ಫೂಟೇಜ್ ನೀಡಬೇಕು ಎಂದು ಅವರು ಹೇಳಿದ್ದಾರೆ.

ಬಾರ್ ಮತ್ತು ಮದ್ಯದಂಗಡಿಗಳಲ್ಲಿ ತೊಂದರೆ ಆದಲ್ಲಿ ಅಬಕಾರಿ ಕಾಯ್ದೆಯಡಿ ಕ್ರಮ ವಹಿಸಲಾಗುವುದು. ಪಾರ್ಕಿಂಗ್ ಬಗ್ಗೆ ವಿಶೇಷ ಗಮನ ಹರಿಸಬೇಕು. ಅಕ್ರಮ ಪಾರ್ಕಿಂಗ್ ಆದಲ್ಲಿ ವ್ಯವಸ್ಥಾಪಕ ಮೇಲೆ ಕ್ರಮ ವಹಿಸಲಾಗುವುದು. 18 ವರ್ಷಕ್ಕಿಂತ ಕಡಿಮೆ ಯವರಿಗೆ ಮದ್ಯ ವಿತರಿಸಬಾರದು. ವಯಸ್ಕರಲ್ಲದವರು ಏಕಾಂಗಿಯಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವ ಬಗ್ಗೆ ಪೋಷಕರು ಈ ಬಗ್ಗೆ ಗಮನ ಹರಿಸಬೇಕು. ಪೋಷಕರು, ಕುಟುಂಬದವರ ಜತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಕ್ಷೇಪವಿಲ್ಲ. ಶಬ್ಧ ಮಾಲಿನ್ಯ ನಿಯಮಗಳನ್ನು ಪಾಲಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಅಶ್ಲೀಲ ಅಥವಾ ಹೆಣ್ಣು ಮಕ್ಕಳ ಅವಹೇಳನ ನಡೆದಲ್ಲಿ ಕ್ರಮ ವಹಿಸಲಾಗುವುದು. ಶುಭ ಕೋರುವ ನೆಪದಲ್ಲಿ ಕೀಟಲೆ, ಭೌತಿಕವಾಗಿ ಸ್ಪರ್ಶ ಮಾಡಿದ್ದಲ್ಲಿ ಕಠಿಣವಾದ ಕ್ರಮ ಮಾಡಲಾಗುವುದು. ಅಬ್ಬಕ್ಕ ಪಡೆ ಈ ನಿಟ್ಟಿನಲ್ಲಿ ಗಸ್ತು ಕಾರ್ಯಾಚರಣೆಯಲ್ಲಿ ತೊಡಗಲಿದೆ. ಸಾರ್ವಜನಿಕ ಸ್ಥಳಗಳಾದ ಉದ್ಯಾನವನ, ಕ್ರೀಡಾಂಗಣ, ರೈಲ್ವೇ ಸ್ಟೇಷನ್ಗಳಲ್ಲಿ ಧೂಮಪಾನ, ಮದ್ಯಪಾನ ಮಾಡಿ ಅಶ್ಲೀಲವಾಗಿ ವರ್ತಿಸುವುದು ಮಾಡಿದ್ದಲ್ಲಿ ನಗರದಾದ್ಯಂತ ನಿಗಾವಣೆ ವಹಿಸಲಿರುವ ಪೊಲೀಸ್ ವಿಶೇಷ ಪಡೆಗಳು ಕಠಿಣ ಕ್ರಮ ವಹಿಸಲಿವೆ.

ಹೊಸವರ್ಷಾಚರಣೆಯ ಒಂದು ದಿನದ ಸಂತೋಷಕ್ಕಾಗಿ ಮಕ್ಕಳ ಜೀವನವನ್ನು ಅಪಾಯಕ್ಕೆ ಸಿಲುಕಿಸದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿರುವ ಡಾ. ಹರ್ಷ, ಅಮಾಯಕರ ಜೀವನಕ್ಕೂ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.

ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡದೆ ಎಚ್ಚರಿಕೆ ವಹಿಸಬೇಕು. ಪಟಾಕಿ ಸಿಡಿಸುವುದು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ವರ್ತಿಸಬಾರದು. ಶುಭಾಶಯ ಕೋರುವ ನೆಪದಲ್ಲಿ ಮಹಿಳಾ ಹಾಸ್ಟೆಲ್ಗಳಿಗೆ ನುಗ್ಗಿ ದಾಂಧಲೆ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹೊಸ ವರ್ಷ ಎಲ್ಲರಿಗೂ ಶುಭ ತರಲಿ ಎಂದು ಪೊಲೀಸ್ ಆಯುಕ್ತ ಡಾ. ಹರ್ಷ ಸಂದೇಶ ನೀಡಿದ್ದಾರೆ.


Spread the love