13 ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಪತ್ತೆ!

Spread the love

13 ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಪತ್ತೆ!

  • ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನೆಯವರಿಗೆ ಹೆದರಿ ನಾಪತ್ತೆ
  • ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮುಗಿಸಿ ಯಶಸ್ವಿ ಇಂಟಿರಿಯರ್ ಡಿಸೈನರ್ ಆದ ಯುವಕ
  • ಸ್ವಂತ ಫ್ಲ್ಯಾಟ್, ಹೊಚ್ಚಹೊಸ ಕಾರು ಖರೀದಿಸಿ ಮನೆಗೆ ವಾಪಾಸಾಗುವ ಕನಸು ಕಂಡಿದ್ದ ಹುಡುಗ

ಕಾರ್ಕಳ: 13 ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕಾರ್ಕಳದ ಯುವಕನೋರ್ವನನ್ನು ಕೊನೆಗೂ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

2012ರಲ್ಲಿ ಕಾಣೆಯಾಗಿದ್ದ ಅನಂತ ಕೃಷ್ಣ ಪ್ರಭು (29) ಅವರನ್ನು ಇದೀಗ ಬೆಂಗಳೂರು ನಗರದಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಇಲ್ಲಿನ ನಿವಾಸಿ ಪ್ರಭಾಕರ ಪ್ರಭು ಅವರ ಪುತ್ರ ಅನಂತ ಕೃಷ್ಣ ಪ್ರಭು (ಆಗ 16 ವರ್ಷ) ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು, ಮುಂಡ್ಕೂರು ಅಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. 2012 ಡಿಸೆಂಬರ್ ತಿಂಗಳಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟು ಹೋದ ಅನಂತಕೃಷ್ಣ ಪ್ರಭು ಬಳಿಕ ಮನೆಗೆ ವಾಪಸ್ಸಾಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ಅನಂತ ಕೃಷ್ಣ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2012 ಅಡಿ ಪ್ರಕರಣ ದಾಖಲಾಗಿತ್ತು.

ವರ್ಷಗಳ ಕಾಲ ಯಾವುದೇ ಸುಳಿವಿಲ್ಲದ ಹಿನ್ನೆಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕೊನೆಗೆ ಅನಂತ ಕೃಷ್ಣ ಪ್ರಭು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಅವರನ್ನು ಪತ್ತೆಹಚ್ಚಿದೆ.

ಸುಮಾರು 13 ವರ್ಷಗಳ ಬಳಿಕ ಪತ್ತೆಯಾದ ಈ ಪ್ರಕರಣದಲ್ಲಿ ಕಾರ್ಯಚರಣೆ ನಡೆಸಿದ ತಂಡದಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ., ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ದೊಡ್ಮನಿ, ಉಡುಪಿ ನಗರ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ, ಹಾಗೂ ಸಿಬ್ಬಂದಿಗಳಾದ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ ಮತ್ತು ಮಲ್ಲಯ್ಯ ಹಿರೇಮಠ ಇದ್ದರು.

ಪರೀಕ್ಷೆಯಲ್ಲಿ ಫೇಲ್!:
ಅನಂತ ಕೃಷ್ಣ‌ಮೂರ್ತಿ ಪ್ರಥಮ ಪಿಯುಸಿ ಪರೀಕ್ಷೆಯೊಂದರಲ್ಲಿ ಅನುತ್ತೀರ್ಣನಾಗಿದ್ದರಿಂದ ಕಾಲೇಜಿನಲ್ಲಿ ಪೋಷಕರನ್ನು ಕರೆದುಕೊಂಡು ಬರುವಂತೆ ಸೂಚಿಸಿದ್ದರು. ಇದರಿಂದ‌ ಭಯಗೊಂಡ ಅನಂತ ಕೃಷ್ಣಮೂರ್ತಿ ಮನೆಯಲ್ಲಿ‌ ವಿಷಯ ಪ್ರಸ್ತಾಪಿಸದೆ,‌ ಮನೆಯವರಿಗೆ ಹೆದರಿ ಬೆಂಗಳೂರಿಗೆ ತೆರಳಿದ್ದನು. ಬೆಂಗಳೂರಿನಲ್ಲಿ ಅವರಿವರ ಸಹಕಾರದಿಂದ ಕೆಲಸ‌ ಮಾಡುತ್ತಾ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಂಡು ಸದ್ಯ ಯಶಸ್ವಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ದುಡ್ಡು ಮಾಡಿ ಮನೆಗೆ ವಾಪಾಸಾಗುವ ಬಯಕೆ!:
ಅನಂತ ಕೃಷ್ಣ ಪೂರ್ತಿ 13 ವರ್ಷಗಳಿಂದ‌ ಬೆಂಗಳೂರಿನಲ್ಲಿದ್ದು, ಪ್ರಮಾಣಿಕವಾಗಿ ದುಡಿದು ದುಡ್ಡು ಮಾಡಿಕೊಂಡು ಸ್ವಂತ ಫ್ಲ್ಯಾಟ್, ಹೊಚ್ಚ ಹೊಸ‌ ಕಾರು ಖರೀದಿಸಿ ಆ ಕಾರಿನಲ್ಲಿಯೇ ಮನೆಗೆ ಬಂದು ಮನೆಯವರಿಗೆ ಅಚ್ಚರಿಪಡಿಸುವ ಯೋಚನೆಯಲ್ಲಿದ್ದರು ಎನ್ನುವುದು ಪೊಲೀಸ್ ಮೂಲಗಳಿಂದ‌ ತಿಳಿದುಬಂದಿದೆ.

ಒಟ್ಟಿನಲ್ಲಿ 13 ವರ್ಷಗಳಿಂದ‌ ನಾಪತ್ತಯಾಗಿದ್ದ ಅನಂತ ಕೃಷ್ಣಮೂರ್ತಿ ಅವರನ್ನು ವಿವಿಧ ಆಯಾಮಗಳಲ್ಲಿ ತನಿಖೆ‌ ನಡೆಸಿ ಪತ್ತೆ ಹಚ್ಚಿ ನಾಪತ್ತೆ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments