15ನೇ ಶತಮಾನದ ಶಾಂತಿಯ ಹರಿಕಾರ – ಮಹಾಕವಿ ರತ್ನಾಕರವರ್ಣಿ – ಡಾ.ಆರ್.ನರಸಿಂಹ ಮೂರ್ತಿ

Spread the love

15ನೇ ಶತಮಾನದ ಶಾಂತಿಯ ಹರಿಕಾರ – ಮಹಾಕವಿ ರತ್ನಾಕರವರ್ಣಿ – ಡಾ.ಆರ್.ನರಸಿಂಹ ಮೂರ್ತಿ

ಮಂಗಳೂರು: ರತ್ನಾಕರ ವರ್ಣಿಯ ಕಾವ್ಯಗಳಲ್ಲಿ ಮಾನವನ ಅಹಂಕಾರದ ಅನೇಕ ಮುಖಗಳ ಚಿತ್ರಣವಿದೆ. ಅಹಂಕಾರದ ಅಧಃಪತನವೇ ಅಹಿಂಸೆ. ಇಂತಹ ಅಹಿಂಸೆಯ ಪ್ರತಿಪಾದನೆಯನ್ನು 500 ವರ್ಷಗಳ ಹಿಂದೆಯೇ ರತ್ನಾಕರ ವರ್ಣಿ ಮಾಡಿದ್ದಾನೆ. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬಹುದೆಂಬ ತತ್ವ ಅವನ ಕಾವ್ಯಗಳಲ್ಲಿದೆ ಎಂದು ಡಾ.ಆರ್.ನರಸಿಂಹ ಮೂರ್ತಿ ನುಡಿದರು.

ಅವರು ಡಾ.ಪಿ. ದಯಾನಂದ ಪೈ.- ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ, ಕಾಲೇಜಿನ ಕನ್ನಡ ವಿಭಾಗ ಮತ್ತು ಮಹಾಕವಿ ರತ್ನಾಕರ ವರ್ಣಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಭಾಗಿತ್ವದಲ್ಲಿ ರತ್ನಾಕರವರ್ಣಿಯ ಕಾವ್ಯಗಳ ಕುರಿತು ನಡೆದ ಪ್ರಚಾರ ಉಪನ್ಯಾಸ ಮಾಲಿಕೆಯಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಮಧ್ಯಕಾಲೀನ ಸಾಹಿತ್ಯದ ಜೈನ ಕವಿಗಳಲ್ಲಿ ರತ್ನಾಕರ ವರ್ಣಿ ಶ್ರೇಷ್ಠ ಕವಿಯಾಗಿದ್ದಾನೆ. ಯೋಗ ಮತ್ತು ಭೋಗಗಳನ್ನು ಸಮನ್ವಯಿಸಿ, ಕಾವ್ಯ ಸರ್ವ ಜನಪ್ರಿಯ ವಾದುದಾಗಿರಬೇಕೆಂಬ ಉತ್ಸಾಹ ಕವಿಯಲ್ಲಿ ಇತ್ತು. ಕುಟುಂಬದಲ್ಲಿ ಸಹಪಂಕ್ತಿ ಭೋಜ£ದ ವಿಚಾರಗಳು, ಶೃಂಗಾರರಸವನ್ನು ಭರತನಂತಹ ಪುರುಷರ ವರ್ಣನೆಯಲ್ಲಿ ಅಳವಡಿಸಿದ್ದು, ರತ್ನಾಕರವರ್ಣಿಯ ಹೆಚ್ಚುಗಾರಿಕೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಅವರು ರತ್ನಾಕರ ವರ್ಣಿಯ ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದೆ ಎಂದರು. ನಾಡಿನ ಖ್ಯಾತ ಗಾಯಕರಾದ ಶ್ರೀ ಚಂದ್ರಶೇಖರ ಕೆದ್ಲಾಯ ಅವರು ರತ್ನಾಕರವರ್ಣಿಯ ಭರತೇಶ ವೈಭವದ ಮತ್ತು ನಂಜುಡ ಕವಿಯ ಕುಮಾರ ರಾಮನ ಸಾಂಗತ್ಯದ ಪದ್ಯಗಳನ್ನು ಹಾಡಿದರು. ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ.ಸೋಮಣ್ಣ ಪ್ರ್ರಾಸ್ತಾವಿಕ ಮಾತುಗಳನ್ನು ಆಡಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿದರು. ಪ್ರೊ. ರವಿಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಕು.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.


Spread the love