2018ನೇ ಸಾಲಿನ `ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ಗೆ ರಂಗನಟ ಮೋಹನ್ ಮಾರ್ನಾಡ್ ಆಯ್ಕೆ

Spread the love

2018ನೇ ಸಾಲಿನ `ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ಗೆ ರಂಗನಟ ಮೋಹನ್ ಮಾರ್ನಾಡ್ ಆಯ್ಕೆ

ಮುಂಬಯಿ: ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಹಿರಿಯ ಕಲಾವಿದ ಪ್ರಶಸ್ತಿ ಪುರಸ್ಕೃತ ರಂಗನಟ, ನಿರ್ದೇಶಕ, ಕತೆಗಾರ ಮೋಹನ್ ಮಾರ್ನಾಡ್ ಅವರು 2018ನೇ ಸಾಲಿನ ರಂಗ ಪ್ರಶಸ್ತಿಯಾದ `ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ ಗೆ ಪಾತ್ರರಾಗಿದ್ದಾರೆ.

`ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ’ ಇಂದಿಲ್ಲಿ ಬೆಂಗಳೂರುನಲ್ಲಿ ಪ್ರಕಟವಾಗಿದ್ದು, `ಜೀವಮಾನದ ಗೌರವ ಪ್ರಶಸ್ತಿ’ಕ್ಕೆ ಹಿರಿಯ ರಂಗಕರ್ಮಿ ಪಿ.ಗಂಗಾಧರ ಸ್ವಾಮಿ ಮೈಸೂರು ಇವರು ಭಾಜನರಾಗಿದ್ದಾರೆ. ರಂಗಭೂಮಿಯಲ್ಲಿ ಸಾಧನೆ ಮಾಡಿದ 25 ಮಹಾನೀಯರುಗಳು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ನಟ ಉಡುಪಿಯ ಟಿ.ಪ್ರಭಾಕರ ಕಲ್ಯಾಣಿ, ದಕ್ಷಿಣ ಕನ್ನಡದ ಉಷಾ ಭಂಡಾರಿ ಪ್ರಶಸ್ತಿಗೆ ಆಯ್ಕೆ ಆದವರಲ್ಲಿ ಪ್ರಮುಖರಾಗಿದ್ದಾರೆ. ಇವರಿಗೆ ತಲಾ ರೂಪಾಯಿ 25,000/- ನಗದು ಸಾವಿರ, ಪ್ರಶಸ್ತಿಪತ್ರ, ಪದಕ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಯಯ್ಯ ದತ್ತಿ ಪುರಸ್ಕಾರ ಪ್ರಶಸ್ತಿಯನು ಹಾಸನದ ನಿಕೋಲಾಸ್, ನತರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಪ್ರಶಸ್ತಿಯನ್ನು ಶಿವಮೊಗ್ಗದ ಮೃತ್ಯುಂಜಯಸ್ವಾಮಿ ಹಿರೇಮಠ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿಯನ್ನು ಧಾರವಾಡದ ಎಂ.ಎಸ್ ಮಾಳವಾಡ, ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರವನ್ನು ರಾಮನಗರದ ನ.ಲಿ ನಾಗರಾಜ್ ಇವರಿಗೆ ಪ್ರಕಟಿಸಿದರು.

ಪ್ರಶಸ್ತಿ ಪಡೆಯುವ ರಂಗಕರ್ಮಿಗಳಿಗೆ ನಗದು ಪುರಸ್ಕಾರ, ಪ್ರಶಸ್ತಿಪತ್ರ ನೀಡಲಾಗುತ್ತದೆ. ಇನ್ನು ಈ ಮಾಹಿತಿಯನ್ನು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಜೆ. ಲೋಕೇಶ್ ಇಂದಿಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೋಹನ್ ಮಾರ್ನಾಡ್: ಇವರು ರಂಗಭೂಮಿಯಲ್ಲಿ ಮಿಂಚಿದ ಹಿರಿಯ ಕಲಾವಿದರು. ಸಹೃದಯಿ, ಹಸನ್ಮುಖಿಯಾಗಿದ್ದು ಕಲಾರಾಧನೆಯಲ್ಲಿ ಅಪಾರ ವಿಶ್ವಸ್ಥರು. ಓರ್ವ ಅಪ್ರತಿಮ, ಪರಿಣತ ಕಲಾವಿದ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂಋ ತಾಲೂಕು ಮೂಡಬಿದರೆ ಸಮೀಪದ ಮೂಡು ಮಾರ್ನಾಡು ಇಲ್ಲಿ ಮೋಹನ್ ಮಾರ್ನಾಡ್ ಹುಟ್ಟಿ ಬೆಳೆದ ಊರು. ಹೊನ್ನಪ್ಪ ಶೆಟ್ಟಿ ಮತ್ತು ಸರಸ್ವತಿ ಶೆಟ್ಟಿದಂಪತಿಯ ಪುತ್ರನಾಗಿ 1964 ಫೆಬ್ರವರಿ 21ರಂದು ಜನಿಸಿದರು. ಎಳವೆಯಲ್ಲೇ ಏಕಾಭಿನಯ ಪಾತ್ರದಲ್ಲಿ ಮುಂಚೂಣಿಯಲ್ಲಿದ್ದವರು. ಭಾಷಣ, ನಾಟಕ, ಕಲೆ ಸಂಸ್ಕೃತಿಯ ಅನನ್ಯ ಆರಾಧಕರಾದ ಇವರು ಆಮೂಲಕವೇ ತನ್ನ ಬಹುಪ್ರತಿಭೆಯನ್ನು ಗುರುತಿಸಿ ಕೊಂಡವರು. 1977ರಲ್ಲಿಯೇ 6ನೇಯ ತರಗತಿ ಮುಗಿಸಿ ಮುಂಬಯಿಗೆ ಬಂದು ಕ್ಯಾಂಟೀನ್ ಮತ್ತು ಹೊಟೇಲುಗಳಲ್ಲಿ ದುಡಿದು ದುಡಿಮೆ ಜೊತೆಗೆ ವಿಟಿ ಇಲ್ಲಿನ ಬಜಾರ್‍ಗೇಟ್ ಅಲ್ಲಿನ ಫ್ರೀ ನೈಟ್ ಹೈಸ್ಕೂಲಿಗೆ ಸೇರಿ ಶಿಕ್ಷಣ ಪಡಕೊಂಡರು. ಮುಂದೆ ಕನ್ನಡ ಭವನ ಜೂನಿಯರ್ ಕಾಲೇಜ್, ಸಿದ್ಧಾರ್ಥ್ ಕಾಲೇಜ್‍ನಲ್ಲಿ ಬಿ.ಕಾಂ ಪದವಿವೀಧರರಾದರು. ಶಾಲಾ ಕಾಲೇಜು ದಿನಗಳಿಂದಲೂ ತಮ್ಮ ನಟನೆಗೆ ಅನೇಕ ಬಹುಮಾನಗಳನ್ನು ಪಡೆದು ಕೊಂಡವರು. ತನ್ನ ಉದ್ಯೋಗದ ಜೊತೆಗೆ ರಂಗಭೂಮಿಯಲ್ಲಿಯೂ ಸಕ್ರೀಯರಾಗಿದ್ದ ಇವರು ಕಲಾಜಗತ್ತು ಸಂಸ್ಥೆಯಲ್ಲಿ ಪ್ರಧಾನ ನಟರಾಗಿದ್ದರು.

ಮಿಲನ (ಕನ್ನಡ) ಯಮಲೋಕೊಡು ಪೆÇಲಿಟಿಕ್ಸ್, ಕಕುಂಮಮ, ಕಲುವೆರೆಕುಂಟು ಮಡಿ ಮಲ್ಪುನಾಯೆ (ತುಳು) ಇವರು ಬರೆದ ನಾಟಕಗಳು. ಬಲ್ಪುನಕುಲಾಗಿಡಪ್ಪುನಕುಲಾ ಏಕಾಂಕ ನಾಟಕದಲ್ಲಿ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಶಹಬ್ಬಾಸ್ ಪಡೆದಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ (28-8-1991) ಇವರ ಪರಿಚಯ ಲೇಖನದಲ್ಲಿ ಅಂದೇ ಮುಂಬಯಿ ರಂಗಭೂಮಿಯ ಸೂಪರ್‍ಸ್ಟಾರ್ ಕನ್ನಡಿಗ ಪ್ರಶಂಸೆಯನ್ನು ಮಾಡಲಾಗಿತ್ತು. ನಾಟಕ ರಂಗದಲ್ಲಿ ಗಟ್ಟಿ ಅನುಭವ ಪಡೆದುಕೊಂಡ ಮೋಹನ್ ಮಾರ್ನಾಡ್ ಟಿವಿ ಧಾರಾವಿಗಳಲ್ಲೂ ಅಭಿನಯಿಸಿದ್ದಾರೆ. ಅಧಿಕಾರಿ ಬ್ರದರ್ಸ್‍ಅವರ (ಝೀ ಟಿವಿ) ಅಶೋಕ್ ಪಂಡಿತ್ ಅವರ ಫಿಲ್ಮೀ ಚಕ್ಕರ್ ಇವುಗಳಲ್ಲಿಯೂ ಕಾಣಿಸಿ ಕೊಂಡಿದ್ದಾರೆ.

1995 ಮುಂಬಯಿಯಲ್ಲಿ, ಮೋಹನ್ ಮಾರ್ನಾಡ್ 40 ಕಲಾವಿದರನ್ನು ಒಗ್ಗೂಡಿಸಿ, `ಟಿಪ್ಪುಸುಲ್ತಾನ್’ ಐತಿಹಾಸಿಕ ನಾಟಕವನ್ನು ನಿರ್ದೇಶಿಸಿ, ಟಿಪ್ಪುಸುಲ್ತಾನ್ ಪಾತ್ರವನ್ನು ನಿರ್ವಹಿಸಿದ ಹೆಗ್ಗಳಿಕೆ ಅವರದು. 90ರ ದಶಕದಲ್ಲಿ ವ್ಯಾಸರಾವ್ ನಿಂಜೂರ್‍ರವರು ಬರೆದ ನಲ್ವತ್ತರ ನಲುಗು ನಾಟಕವನ್ನು ನಿರ್ದೇಶಿಸಿದ್ದರು ಇದು 8 ಬಾರಿ ಪ್ರದರ್ಶನವನ್ನುಕಂಡಿತ್ತು.

ಮೋಹನ್ ಪಾತ್ರವಹಿಸಿದ ಅವರ ಖ್ಯಾತ ನಿರ್ದೇಶಕರು ಎಸ್. ಯು ಪುತ್ತಿಗೆ, ಪಾಂಗಣ್ಣಾಯ, ಪ್ರಾ| ನಾಗರಹಳ್ಳಿ, ದಾಮೋದರ ಬಂಗೇರ, ಶ್ರೀನಾಥ್, ಎಚ್.ಮೋಹನ್, ವಿಜಯಕುಮಾರ್ ಶೆಟ್ಟಿ, ಎಚ್.ಕೆ ಕರ್ಕೇರ, ಶ್ರೀಪತಿ ಬಲ್ಲಾಳ್, ಸಂತೋಷ್ ಬಲ್ಲಾಳ್, ಸದಾನಂದ ಸುವರ್ಣ, ಗಿರಿಧರ್ ಕಾರ್ಕಳ, ಡಾ| ಭರತ್‍ಕುಮಾರ್ ಪೆÇಲಿಪು, ರಮೇಶ್ ಶಿವಪುರ, ಎಂ.ಎಸ್ ಸತ್ಯು, ಅಶೋಕ್ ಪಂಡಿತ್, ಚಂದ್ರಪ್ರಕಾಶ್ ದ್ವಿವೇದಿ, ಶಾಮ್ ಸುಂದರ್, ರಾಮಚಂದ್ರ, ಅಹಲ್ಯಾ ಬಲ್ಲಾಳ್. ಮಾರ್ನಾಡ್ ಅಭಿನಯಿಸಿದ ಒಟ್ಟು ನಾಟಕ 374. ನಿರ್ದೇಶಿಸಿದ ನಾಟಕ ದೈವ್ವನ ಮನೆ, ನಾವಿಲ್ಲದಾಗ, ಬಿಡುಗಡೆ, ಕಕುಂಮಮ, ಟಿಪ್ಪು ಸುಲ್ತಾನ್, ನಲ್ವತ್ತರ ನಲುಗು. 6 ಜಾಹಿರಾತು ಚಿತ್ರದಲ್ಲಿ ನಟಿಸಿದಾರೆ.

ಒಂದು 13 ಎಪಿಸೋಡುಗಳ ಕಥಾಧಾರೆ ಕನ್ನಡ ಧಾರವಾಹಿಗೆ ಸಂಭಾಷಣೆ, ನಟನೆ, ಸಹಾಯಕ ನಿರ್ದೇಶನ ಮಾಡಿದ್ದಾರೆ. `ಸ್ವಾಮೀ ಸ್ವಾಮೀ’ ಕನ್ನಡದಾರವಾಹಿಯಲ್ಲಿ ನಟನೆ… ಸಂಗೀತರಚನೆ ಹಿಂದಿ ದಾರವಾಹಿ ಚಾಣಕ್ಯ, ಫಿಲ್ಮೀಚಕ್ಕರ್ ಕಮಾಂಡರ್‍ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸತ್ಯು ನಿರ್ದೇಶನದ ತಗಳಿ ಶಿವಶಂಕರ್ ಪಿಳ್ಳೈ ಅವರ ಜ್ಞಾನಪೀಠ ಪ್ರಶಸ್ತಿ ಪಡೆದ `ಕಯರ್’ ಟಿವಿ ದಾರವಾಹಿಗೆ ಸಹ ನಿರ್ದೇಶನ ಮತ್ತು `ಇಟ್ಟು ನಾಣು’ ಪಾತ್ರ ನಿರ್ವಹಿಸಿದ್ದಾರೆ.

ಲಕ್ಷಕ್ಕೂ ಅಧಿಕ ರೇಡಿಯೋ ಟಿವಿ ಜಾಹಿರಾತುಗಳಿಗೆ ಕಂಠದಾನ ಮಾಡಿದ ಹಿರಿಮೆಗೆ `ಅಭಿನಯಚಕ್ರವರ್ತಿ’ ಪ್ರಶಸ್ತಿ ಲಭಿಸಿದೆ. ಮಾರ್ನಾಡರು ಒಳ್ಳೆಯ ಓದುಗ ಮಾತ್ರವಲ್ಲ ಲೇಖಕ, ಅಂಕಣ ಬರಹಗಾರ, ಕತೆಗಾರರೂಆಗಿದ್ದಾರೆ.ಕನ್ನಡದ ಆಸ್ತಿ ಮಾಸ್ತಿಯವರ ಜನಶತಾಬ್ದಿ ಸಂದರ್ಭದಲ್ಲಿ ಕರ್ನಾಟಕ ಸಂಘವು ಹೊರನಾಡ ಕನ್ನಡಿಗರಿಗಾಗಿ ಏರ್ಪಡಿಸಿದ ಸಣ್ಣಕಥಾ ಸ್ಪರ್ಧೆಯಲ್ಲಿ ಬೇಕು ಬೇಡಗಳ ನಡುವೆ ಅಷ್ಟಿಷ್ಟು ಕಥೆಗೆ ಪ್ರಥಮ ಬಹುಮಾನ ದೊರಕಿತ್ತು. ಮುಂಬಯಿಯ ಪ್ರಥಮಕನ್ನಡದೈನಿಕಉದಯರಾಗ ಏರ್ಪಡಿಸಿದ ಮಿನಿ ಕಾದಂಬರಿ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ ಲಭಿಸಿತ್ತು.

ಸದ್ದಿಲ್ಲದೆ ಸಮಾಜಸೇವೆ ಮಾಡುವ ಮೋಹನ್ ಮಾರ್ನಾಡರಿಗೆ 2007ರಲ್ಲಿ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕಅಕಾಡೆಮಿ ಬೆಂಗಳೂರು ಗಾಯನ ಸಮಾಜರಂಗಮಂದಿರದಲ್ಲಿ ಸುವರ್ಣಕರ್ನಾಟಕದ ನೆನಪಿನಲ್ಲಿ `ಸಮಾಜರತ್ನರಾಜ್ಯ ಪ್ರಶಸ್ತಿ’ ಯನ್ನು ನೀಡಿ ಸನ್ಮಾನಿಸಲಾಯಿತು. ಮೋಹನ್ ಮಾರ್ನಾಡರು ನಿರ್ಮಿಸಿದ `ಸುದ್ದ’ ಡಿಜಿಟಲ್ ಚಲನಚಿತ್ರ, 2006ರಲ್ಲಿ 8ನೇ ಏಷ್ಯನ್ ಚಲನ ಚಿತ್ರೋತ್ಸವದಲ್ಲಿ ಭಾರತೀಯ ವಿಭಾಗದ ಶ್ರೇಷ್ಠ ಚಲನಚಿತ್ರವೆಂದು ಪ್ರಶಸ್ತಿ ಪಡೆದಿದೆ. ಸುದ್ದ ಜರ್ಮನಿಯ ಸ್ಟುಟ್‍ಗರ್ಟ್ ಚಿತ್ರೋತ್ಸವದಲ್ಲಿಯೂ ಪ್ರದರ್ಶನ ಗೊಂಡಿತ್ತು. ಆದ್ದರಿಂದಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾದ ಪ್ರಥಮ ತುಳು ಡಿಜಿಟಲ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

`ಸುದ್ದ’ ತುಳು ಚಲನಚಿತ್ರತೆರೆಕಂಡ ಮಾರನೇ ವರ್ಷವೇ, ಮಂಗಳೂರು ಚಿತ್ರ ನಿರ್ಮಾಪಕರ ಸಂಘ `ನಾಗರಿಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಜರಗಿದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ಮೋಹನ್ ಮಾರ್ನಾಡರು ನಾಯಕನ ಪಾತ್ರದಲ್ಲಿತಮ್ಮ ನಟನೆಗೆ 6 ಬಾರಿ ಬಹುಮಾನಗಳನ್ನು ಪಡೆದಿದ್ದಾರೆ. ಉಡುಪಿಯ ಸುಮನಸ ಕೊಡವೂರು ಅವರ ಅಂತರ್ಗತದಲ್ಲಿ ರಾಷ್ಟ್ರೀಯ ಬಹುಭಾಷಾ ನಾಟಕ ಉತ್ಸವವು ಜರಗಿದ ವೇಳೆ ಸುಮನಸ ವತಿಯಿಂದ ಮೋಹನ ಮಾರ್ನಾಡರನ್ನು ಸನ್ಮಾನಿಸಿದ್ದರು. ಇವರಲ್ಲಿರುವಅದ್ಭುತ ನಟನಾ ಕೌಶಲ್ಯವನ್ನು ಗುರುತಿಸಿ 2013ರಲ್ಲಿ ಕಾಂತಾವರ ಕನ್ನಡ ಸಂಘವು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2015ರಲ್ಲಿ ಕನ್ನಡ ಕಲಾ ಕೇಂದ್ರ ಮುಂಬಯಿ (ರಿ.) ವತಿಯಿಂದ ಸದಾನಂದ ಸುವರ್ಣ ಅವರು ಕೊಡ ಮಾಡುವ `ಸುವರ್ಣ ಶ್ರೀ ಪ್ರಶಸ್ತಿ’ ಲಭಿಸಿದೆ. ಮುದ್ರಾಡಿ ನಾಟಕದೂರು ಸಂಸ್ಥೆ (ರಿ.) ಏರ್ಪಡಿಸಿದ ರಾಷ್ಟ್ರೀಯ ರಂಗೋತ್ಸವ ಸಂದರ್ಭದಲ್ಲಿ ಮೋಹನ್ ಮಾರ್ನಾಡ್ ಅವರನ್ನು ಸಕಲ ಗೌರವಗಳಿಂದ ಸನ್ಮಾನಿಸಿದೆ. ಮಾತ್ರವಲ್ಲದೆ ಹೊರನಾಡಿನಲ್ಲಿ ಇವರ ಪ್ರತಿಭೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮುಂಬಯಿ ಸಂಘ ಸಂಸ್ಥೆಗಳಿಂದ ಮೂವತೈದಕ್ಕೂ ಮಿಕ್ಕಿದ ಸನ್ಮಾನಗಳು ಮೋಹನ್ ಮಾರ್ನಾಡರಿಗೆ ಸಂದಿವೆ.

ಅನೇಕ ವರ್ಷಗಳಿಂದ ಮುಂಬಯಿನಲ್ಲಿ ನೆಲೆಯಾಗಿದ್ದಾರೆ. ಸೀಮಾ ಮೋಹನ್ ಹಾಗೂ ಸುಪುತ್ರಿ ಮಾನವಿ ಮಾರ್ನಾಡ್ ಅವರೊಂದಿಗೆ ಸದ್ಯ ಬಾಂದ್ರಾದಲ್ಲಿ ವಾಸವಾಗಿದ್ದಾರೆ.


Spread the love