ದ.ಕ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿದ್ಧತೆ

Spread the love

ದ.ಕ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿದ್ಧತೆ

ಮ0ಗಳೂರು: ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು. ಇಡೀ ಅಂತರಾಷ್ಟ್ರೀಯ ಸಮುದಾಯ ಬಾಲಕಾರ್ಮಿಕ ಪದ್ಧತಿಯನ್ನು ಸಮಾಜದಿಂದ ಕಿತ್ತೆಗೆಯಲು ಪ್ರಯತ್ನಿಸುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಕಾರ್ಮಿಕ ಜಿಲ್ಲೆಯೆಂದು ಘೋಷಿಸಲು ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ. ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್, ನಗರಾಭಿವೃದ್ಧಿ, ರೇಷ್ಮೆ, ಕೈಗಾರಿಕಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳಲ್ಲಿ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯ ಕಲಂ 17 ರಡಿ ನೇಮಕಗೊಂಡ ನಿರೀಕ್ಷಕರುಗಳು ಮತ್ತು ಸರ್ಕಾರೇತರ ಸಂಸ್ಥೆಯಾದ ಚೈಲ್ಡ್ ಲೈನ್ ನಿರ್ದೇಶಕರು ಮತ್ತಿತರರೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳು ಎರಡು ಸಭೆಗಳನ್ನು ನಡೆಸಿ ಇಡೀ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯೆಂದು ಘೋಷಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳು ಮತ್ತು ಮಾನದಂಡಗಳ ಬಗ್ಗೆ ಸೂಚನೆಯನ್ನು ನೀಡಿರುವರು.
ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಂದು ಈ ಬಗ್ಗೆ ಮಂಗಳೂರು ಪುರಭವನದಲ್ಲಿ ವಿವಿಧ ಇಲಾಖೆಗಳ ಕಲಂ 17 ರಡಿಯ ನಿರೀಕ್ಷಕರುಗಳಿಗೆ ಎರಡು ಸುತ್ತಿನ ತರಬೇತಿ ನಡೆಸಿ ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ.
ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ, ಹೋಟೆಲ್, ಕಾರ್ಖಾನೆಗಳು, ಮನೆಗಳು, ಅಪಾರ್ಟ್‍ಮೆಂಟ್‍ಗಳು ಮೊದಲಾದವುಗಳಲ್ಲಿ ಬಾಲಕಾರ್ಮಿಕರು ಇಲ್ಲವೆಂದು ಖಚಿತಪಡಿಸಿಕೊಳ್ಳಲು ಗ್ರಾಮ ಪಂಚಾಯತ್, ಪುರಸಭೆ/ಪಟ್ಟಣ ಪಂಚಾಯತ್/ಸಿಟಿ ಮುನ್ಸಿಪಲ್ ಕೌನ್ಸಿಲ್ ಮತ್ತು ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಬಾಲಕಾರ್ಮಿಕರು ಇಲ್ಲವೆಂಬ ಬಗ್ಗೆ ಕುಟುಂಬದ ಮುಖ್ಯಸ್ಥರಿಂದ ಘೋಷಣೆಯನ್ನು ಪಡೆಯಲಿರುವರು ಹಾಗೆಯೇ ಬಾಲಕಾರ್ಮಿಕ ಮುಕ್ತ ಜಿಲ್ಲೆಯೆಂಬ ಸ್ಟಿಕ್ಕರ್‍ಗಳನ್ನು ಪ್ರತಿಯೊಂದು ಮನೆಗೆ ಅಂಟಿಸಲಿರುವರು, ಅಲ್ಲದೆ ಉದ್ಯೋಗದಾತರ ಸಂಸ್ಥೆಗಳಲ್ಲಿ ಬಾಲಕಾರ್ಮಿಕರ ನೇಮಕಾತಿ ಬಗ್ಗೆ ತಪಾಸಣೆ ನಡೆಸುವರು. ಒಂದು ವೇಳೆ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕಾನೂನುಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮೂಲಕ ಮುಖ್ಯೋಪಾಧ್ಯಾಯರು, ಕುಟುಂಬದ ಮುಖ್ಯಸ್ಥರಿಂದ ತಮ್ಮ ಮನೆಯಲ್ಲಿ ಬಾಲಕಾರ್ಮಿಕರು ಇಲ್ಲವೆಂಬ ಘೋಷಣೆಯನ್ನು ಪಡೆಯುತ್ತಾರೆ. ಎಲ್ಲಾ ಅಂಕಿಅಂಶಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಕಛೇರಿಗಳಲ್ಲಿ ನಿಗದಿತ ನಮೂನೆಯಲ್ಲಿ ನಿರ್ವಹಿಸಲು ಸೂಚಿಸಲಾಗಿರುತ್ತದೆ.
2016ರ ಆಗಸ್ಟ್ 15 ರಂದು ಇಡೀ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯೆಂದು ಘೋಷಿಸಲು ಉದ್ದೇಶಿಸಲಾಗಿದ್ದು ಜುಲೈ 31 ರೊಳಗಾಗಿ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಇಡೀ ಪ್ರಕ್ರಿಯೆಯನ್ನು ಮಾನಿಟರ್ ಮಾಡಲು ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಜಿಲ್ಲಾ ಮಟ್ಟದಲ್ಲಿ ಕಾರ್ಮಿಕ ಅಧಿಕಾರಿಗಳಿಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲು ಹಾಗೂ ಕಾರ್ಮಿಕ ನಿರೀಕ್ಷಕರುಗಳು ತಾಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ.
ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ನಡೆಸುತ್ತಿರುವ ಕ್ರಮಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಂಡಿರುವ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಚೈಲ್ಡ್‍ಲೈನ್:1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343, 2433132, 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131 ಗೆ ಕರೆ ಮಾಡಿ ತಿಳಿಸಲು ಸಹಾಯಕ ಕಾರ್ಮಿಕ ಆಯುಕ್ತರು ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love