370ನೇ ವಿಧಿ ರದ್ಧತಿ ಬಳಿಕ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ ಕಾಶ್ಮೀರ – ಸದಾನಂದ ಗೌಡ

Spread the love

370ನೇ ವಿಧಿ ರದ್ಧತಿ ಬಳಿಕ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ ಕಾಶ್ಮೀರ – ಸದಾನಂದ ಗೌಡ

ಉಡುಪಿ: 370ನೇ ವಿಧಿ ರದ್ಧತಿ ಬಳಿಕ  ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿ ಇಲಾಖೆಯಿಂದಲೂ ಹೊಸ ಯೋಜನೆಯನ್ನು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬುದಾಗಿ ಎಲ್ಲ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದರು.

ಮಣಿಪಾಲದ ಕಂಟ್ರಿಇನ್‌ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ 370ನೇ ವಿಧಿ ರದ್ಧತಿ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಾಶ್ಮೀರವನ್ನು ಇತರೆ ರಾಜ್ಯಗಳ ಸರಿ ಸಮನಾಗಿ ನಿಲ್ಲುವಂತೆ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆ ಹಾಕಿಕೊಂಡಿದೆ ಎಂದರು.‌

ಕಾಶ್ಮೀರದಲ್ಲಿ ಐಐಟಿ, ಏಮ್ಸ್‌, ಕೈಗಾರಿಕೀಕರಣ, ಪ್ರವಾಸೋದ್ಯಮ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ವಿಶೇಷ ಸ್ಥಾನಮಾನ ರದ್ದು ಮಾಡಿದ ಉದ್ದೇಶವೇ ಕಾಶ್ಮೀರ ಅಭಿವೃದ್ಧಿಗೆ ತೆರೆದುಕೊಳ್ಳಬೇಕು ಎಂಬುದು ಎಂದರು.

ವಿಶೇಷ ಸ್ಥಾನಮಾನದ ಫಲವಾಗಿ ಭಯೋತ್ಪಾದನೆ ಹೆಚ್ಚಾಗಿತ್ತು. ಭದ್ರತೆಯ ವಿಚಾರದಲ್ಲಿ ಗೃಹ ಇಲಾಖೆಗೆ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ. ಉಗ್ರರ ಸ್ವರ್ಗವಾಗಿತ್ತು. ಪಾಕಿಸ್ತಾನದ ಪರವಾಗಿದ್ದ ಕೆಲವರು ವಿಶೇಷ ಸ್ಥಾನಮಾನ ದುರುಪಯೋಗ ಮಾಡಿ ಕೊಳ್ಳುತ್ತಿದ್ದರು. ಕೇಂದ್ರ ನೀಡುತ್ತಿದ್ದ ಅನುದಾನ ಅಲ್ಲಿನ ಎರಡು ಮೂರು ಕುಟುಂಬಗಳ ಪಾಲಾಗುತ್ತಿತ್ತು. ಈಗ ಇವೆಲ್ಲದಕ್ಕೂ ತಡೆ ಬಿದ್ದಿದೆ ಎಂದರು.

ಕಣಿವೆ ರಾಜ್ಯ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಹೋಟೆಲ್‌ಗಳು, ವಿದ್ಯಾಸಂಸ್ಥೆಗಳು, ಕೈಗಾರಿಕೆಗಳು ತಲೆ ಎತ್ತಲಿವೆ. ಗುಂಡಿನ ಶಬ್ಧ ಮೊರೆಯುತ್ತಿದ್ದ ಜಾಗದಲ್ಲಿ ಶಾಂತಿ ನೆಲೆಸುತ್ತಿದೆ. ಉಗ್ರರ ಚಟುವಟಿಕೆಗಳಿಗೆ ತಡೆ ಬಿದ್ದಿದೆ ಎಂದು ಸದಾನಂದ ಗೌಡರು ಹೇಳಿದರು.

ಕಾಶ್ಮೀರ ಬಿಜೆಪಿಗೆ ರಾಜಕೀಯ ವಿಷಯವಲ್ಲ; ದೇಶದ ಅಖಂಡತೆಯ ವಿಷಯ. ಹಾಗಾಗಿಯೇ 370ನೇ ವಿಧಿ ರದ್ಧತಿ ನಿಲುವಿಗೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪಕ್ಷಾತೀತ ಬೆಂಬಲ ದೊರೆಯಿತು. ಒಂದು ದೇಶ, ಒಂದು ಚುನಾವಣೆ, ಸಮಾನ ನಾಗರೀಕ ಸಂಹಿತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ ಎಂದರು.‌

  ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಶಾಸಕರಾದ ರಘುಪತಿ ಭಟ್‌, ಸುನೀಲ್ ಕುಮಾರ್‌, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು ಇದ್ದರು.


Spread the love