ನಮ್ಮ ಪ್ರಾರ್ಥನಾ ವಿಧಿಯ ಭಾಷೆ ಬಗ್ಗೆ ಹಸ್ತಕ್ಷೇಪ ಸಲ್ಲದು – ರೊಯ್ ಕ್ಯಾಸ್ತಲಿನೊ
ಮಂಗಳೂರು: ನಮ್ಮ ಪ್ರಾರ್ಥನಾ ವಿಧಿಯ ಭಾಷೆ ಬಗ್ಗೆ ಹಸ್ತಕ್ಷೇಪ ಮಾಡುವುದನ್ನು ಒಪ್ಪುವುದಿಲ್ಲ ಎಂದು ಅಧ್ಯಕ್ಷರು, ಕಥೊಲಿಕ ಥಿಂಕ್ ಟ್ಯಾಂಕ್ ಸಮಿತಿ, ಬೆಂಗಳೂರು ಇದ ಅಧ್ಯಕ್ಷ, ಮಂಗಳೂರು ಕಥೊಲಿಕ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ರೊಯ್ ಕ್ಯಾಸ್ತಲಿನೊ ಹೇಳಿದ್ದಾರೆ
ಪತ್ರಿಕಾ ವರದಿಗಳಲ್ಲಿ ಗಮನಿಸಿದಂತೆ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರು ಮತ್ತವರ ತಂಡ ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಡಾ. ಪೀಟರ್ ಮಚಾದೊ ರವರನ್ನು ಭೇಟಿಯಾಗಿ, ಚರ್ಚುಗಳ ಪ್ರಾರ್ಥನಾ ವಿಧಿಗಳಲ್ಲಿ ಕನ್ನಡ ಬಳಸುವಂತೆ ಒತ್ತಾಯಪೂರ್ವಕ ಮನವಿ ಮಾಡಿರುವುದು ವರದಿಯಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇದರಲ್ಲಿ ಎರಡು ಮಾತಿಲ್ಲ. ಆದರೆ ಕನ್ನಡದ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ, ಬ್ಯಾರಿ, ಲಂಬಾಣಿ ಮತ್ತಿತರ ಭಾಷೆಗಳನ್ನು ಮಾತೃಭಾಷೆಯನ್ನಾಗಿ ಹೊಂದಿರುವ ಲಕ್ಷಾಂತರ ಜನ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಕನ್ನಡವನ್ನು ಗೌರವಿಸುತ್ತಲೇ ಅವರವರ ಮಾತೃಭಾಷೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಆಯಾ ಭಾಷಿಕ ಸಮುದಾಯದ್ದು. ಇದಕ್ಕೆ ದೇಶದ ಸಂವಿಧಾನವೇ ಅವಕಾಶ ನೀಡಿದೆ. ನಮ್ಮ ಸರಕಾರಗಳೂ ವಿವಿಧ ರೀತಿಯ ಸಹಕಾರ ನೀಡುತ್ತಾ ಬಂದಿವೆ.
ಭಾಷೆಯ ಉಳಿವಿನಲ್ಲಿ ಧರ್ಮ ಮಹತ್ತರ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಕ್ರೈಸ್ತ ಧರ್ಮದಿಂದ ಕೊಂಕಣಿ ಭಾಷೆ ಉಳಿದಿದೆ, ಬೆಳೆದಿದೆ. ಸರಕಾರ ಕೂಡಾ ಕೊಂಕಣಿ ಅಕಾಡೆಮಿ ನೀಡಿ ಕೊಂಕಣಿ ಭಾಷೆಗೆ ಪ್ರೋತ್ಸಾಹ ನೀಡುತ್ತಿದೆ.
ಬೆಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲೂ ಕನ್ನಡದೊಡನೆ, ಇಂಗ್ಲೀಷ್, ತಮಿಳು, ಮಲಯಾಳಂ, ಕೊಂಕಣಿ ಭಾಷೆಗಳ ಪ್ರಾರ್ಥನಾ ವಿಧಿಗಳಿಗೆ ಅವಕಾಶವಿದೆ. ಕೇವಲ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು ಎಂಬ ಇಂದಿನ ಮನವಿ, ಮುಂದೆ ಹೇರಿಕೆಯಾಗುವ ಸಂಭವವಿದೆ. ಇದನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ.
ಕನ್ನಡಕ್ಕಾಗಿ ನಾವೂ ಕೈ ಎತ್ತುತ್ತೇವೆ. ಆದರೆ ನಮ್ಮ ಪ್ರಾರ್ಥನಾ ವಿಧಿಗಳ ಭಾಷೆ ಯಾವುದಿರಬೇಕೆಂದು ನಿರ್ಧರಿಸುವವರು ನಾವೇ ವಿನಹ ಇತರರಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














These people have no idea what is the limits. They crossing all the limits. In Tulu Nadu, these Kannadigas destroyed our Tulu language and enforced Kannada.