ಪ್ರಿಯತಮೆ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ ನೇಣಿಗೆ ಶರಣಾದ ಯುವಕ!
ಉಡುಪಿ: ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮಾತನಾಡಿ ರೂಮ್ ಒಳಗೆ ಹೋದ ಯುವಕನೊಬ್ಬ ಕೆಲವೇ ಹೊತ್ತಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿದೆ.
ಕುಂಜಿಬೆಟ್ಟು ನಿವಾಸಿ ರಾಜು ಅವರ ಪುತ್ರ ರಂಜಿತ್ (28) ಆತ್ಮಹತ್ಯೆಗೆ ಶರಣಾದ ಯುವಕ. ಜ.29ರಂದು ರಂಜಿತ್ ಅವರು ಪೇಂಟಿಂಗ್ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿದ್ದರು. ಅನಂತರ ತಾನು ಪ್ರೀತಿಸುತ್ತಿದ್ದ ಹುಡುಗಿ ಪ್ರೀತಿ ಎಂಬವರ ಜತೆ ಫೋನಿನಲ್ಲಿ ಮಾತನಾಡುತ್ತಾ ಅವರ ರೂಮಿನೊಳಗೆ ಹೋಗಿದ್ದಾರೆ.
ರಾತ್ರಿ ವೇಳೆ ಮನೆಯ ವಾಟರ್ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದುದರಿಂದ ಅವರ ತಂದೆ ವಾಟರ್ ಟ್ಯಾಂಕಿನ ವಾಲ್ ಅನ್ನು ಆಫ್ ಮಾಡಲು ಹೋಗುವಾಗ ರಂಜಿತ್ ಅವರ ರೂಮಿನ ಕಿಟಕಿ ತೆರೆದು ನೋಡಿದ್ದಾರೆ. ಈ ವೇಳೆ ಆತ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಕೆಳಗೆ ಇಳಿಸಿ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಆತನಿಗೆ 20 ನಿಮಿಷ ಶುಶೂಷೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಈ ಸಾವಿನಲ್ಲಿ ಸಂಶಯವಿರುವುದಾಗಿ ಆತನ ಅಣ್ಣ ರಕ್ಷಿತ್ ಅವರು ನೀಡಿರುವ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













