ಏ.19: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ ಮತ್ತು ದಿನಾಂಕ ಘೋಷಣೆ

Spread the love

ಏ.19: ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ ಮತ್ತು ದಿನಾಂಕ ಘೋಷಣೆ

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಇದರ ಕಾರ್ಯಾಲಯದ ಉದ್ಘಾಟನೆ ಮತ್ತು ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಕಾರ್ಯಕ್ರಮವು ಏ 19 ರಂದು ಭಾನುವಾರ ಪೂರ್ವಾಹ್ನ ಘಂಟೆ 10.30ಕ್ಕೆ ಕಾರ್ಕಳ ‘ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ. ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎನ್ ಎನ್ ರಾಜೇಂದ್ರ ಕುಮಾರ್ ಹೇಳಿದರು.

ಅವರು ಭಾನುವಾರ ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ, ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2027ರ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆ ಮಾಡಲಿರುವರು. ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯ ಉದ್ಘಾಟನೆ ನೆರವೇರಿಸಲಿರುವರು.

ಕರ್ನಾಟಕ ಸರಕಾರದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖಾ ಸಚಿವರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಗೌರವ ಸಂರಕ್ಷಕರಾದ ಡಿ. ಸುಧಾಕರ್ ಅವರು ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರು ವಹಿಸಲಿರುವರು. ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಹಾಗೂ ಅಧಾನಿ ಗ್ರೂಫ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರಾದ ಕಿಶೋರ್ ಅಳ್ವ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ. ಹಾಗೂ ಮಾಜಿ ಸಚಿವರು, ಮಹಾಮಸ್ತಕಾಭಿಷೇಕ ಸಮಿತಿಯ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದರು.

ಕಾರ್ಕಳ ಶ್ರೀ ಜೈನ ಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯ, ತ್ಯಾಗಿಗಳು ಹಾಗೂ ನಾಡಿನ ಎಲ್ಲಾ ಪೂಜ್ಯ ಗುರುವರೇಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಮಹಾಮಸ್ತಕಾಭಿಷೇಕ ಮಹೋತ್ಸವವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಎಮ್. ಎನ್. ರಾಜೇಂದ್ರ ಕುಮಾರ್ರವರ ಕಾರ್ಯಾಧ್ಯಕ್ಷತೆಯಲ್ಲಿ ಸಂಯೋಜಿಸಲ್ಪಟ್ಟ ಮಹಾಮಸ್ತಕಾಭಿಷೇಕ ಸಮಿತಿಯು ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸುವ್ಯವಸ್ಥಿತವಾಗಿ ನೆರವೇರಿಸುವುದಕ್ಕಾಗಿ ಈಗಾಗಲೇ ಸಮಾಜದ ಸಮಸ್ತ ಸಜ್ಜನರ ಸಹಕಾರದೊಂದಿಗೆ ಕಾರ್ಯಪ್ರವೃತ್ತವಾಗಿದೆ.

ಈ ಮಹೋತ್ಸವದ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗರು ಕಾರ್ಕಳಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಆಗಮಿಸಲಿರುವ ಲಕ್ಷಾಂತರ ಯಾತ್ರಿಕರಿಗೆ ಕಾರ್ಕಳ ಕ್ಷೇತ್ರದಲ್ಲಿ ಮೂಲಭೂತ ಸವಲತ್ತುಗಳನ್ನು ಒದಗಿಸುವುದರ ಬಗ್ಗೆ ಸರಕಾರದ ವಿವಿಧ ಇಲಾಖೆಗಳು ವ್ಯವಸ್ಥೆ ಮಾಡಬೇಕಾದ ಸೌಲಭ್ಯಗಳು, ಕಾಮಗಾರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯಬೇಕಾದ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಒಟ್ಟು ರೂ. 82,37,52,000/- ವೆಚ್ಚದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಈಗಾಗಲೇ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. 2015ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಹೆಚ್ಚಿನ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿದ್ದು, ಈ ಬಾರಿಯೂ ಅವರ ನೇತೃತ್ವದ ರಾಜ್ಯ ಸರಕಾರಕ್ಕೆ ಸಲ್ಲಿಸಲಾದ ಅಂದಾಜು ಪಟ್ಟಿಯ ಉಲ್ಲೇಖಿತ ಕ್ರಿಯಾ ಯೋಜನೆಗೆ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ಇದೆ.

ಈ ಉಲ್ಲೇಖಿತ ಕ್ರಿಯಾ ಯೋಜನೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರಕಾರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರೂ. 1.59 ಕೋಟಿ ಮಂಜೂರು ಮಾಡಿ ಮೊದಲನೇ ಕಂತಾಗಿ ಶೇಕಡಾ75ರಷ್ಟು (ರೂ.1,19,25,000) ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅನುದಾನದಲ್ಲಿ ಅಟ್ಟಳಿಗೆ ನಿರ್ಮಾಣಕ್ಕೆ ರೂ. 37.50ಲಕ್ಷ, ಜೈನ ಮಠದ ಬಳಿಯಿರುವ ತ್ಯಾಗಿ ಭವನ ಹಾಗೂ ಮಾತಾಜಿ ಭವನ ನವೀಕರಣಕ್ಕೆ ರೂ.63.75ಲಕ್ಷ, ಶ್ರೀ ಜೈನ ಮಠದ ಬಳಿಯಿರುವ ಸಭಾಂಗಣದ ನವೀಕರಣಕ್ಕೆ ರೂ. 8.25ಲಕ್ಷ ಹಾಗೂ ಶ್ರೀ ಗೊಮ್ಮಟೇಶ್ವರ ಬೆಟ್ಟಕ್ಕೆ ನೀರಿನ ಸರಬರಾಜು ಹಾಗೂ ಕೊಳವೆ ಬಾವಿ ನಿರ್ಮಾಣಕ್ಕೆ ರೂ. 9.75 ಲಕ್ಷ ಬಿಡುಗಡೆಗೊಳಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಹಾಗೂ ಇತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments