ಓವರ್ ಟೇಕ್ ಭರದಲ್ಲಿ ಬಸ್ ಗೆ ಬೈಕ್ ಢಿಕ್ಕಿ: ಸವಾರ ದಾರುಣ ಸಾವು
ಕುಂದಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ.
ಸೌಕೂರು ನಿವಾಸಿ ವಿಜಯ್ ದೇವಾಡಿಗ (26) ಮೃತ ಯುವಕ.
ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದ ವಿಜಯ್ ಶನಿವಾರ ಬೆಳಿಗ್ಗೆ ಬೈಕಿನಲ್ಲಿ ತ್ರಾಸಿಯಿಂದ ಸೌಕೂರು ಕಡೆಗೆ ತೆರಳುತ್ತಿದ್ದಾಗ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿಜಯ್ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೇ ಟಿಪ್ಪರ್ ಹಾಗೂ ಸರ್ಕಾರಿ ಬಸ್ ನಡುವೆ ಶೆಟ್ರಕಟ್ಟೆಯಲ್ಲಿ ನಡೆದ ಭೀಕರ ಅಪಘಾತ ನೆನಪು ಮಾಸುವ ಮುನ್ನವೇ ಅದೇ ಸ್ಥಳದ ಅನತಿ ದೂರದಲ್ಲೇ ಮತ್ತೊಂದು ಅಪಘಾತ ಸಂಭವಿಸಿರುವುದು ಸ್ಥಳೀಯರನ್ನು ಇನ್ನಷ್ಟು ಬೆಚ್ಚಿಬೀಳಿಸಿದೆ.













