ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದು ಸಮಾಜಕ್ಕೆ ಸುಳ್ಳು ಹೇಳಿದ ಮುಸ್ಲಿಂ ಮಹಿಳೆಯರಿಂದ ಬಿಜೆಪಿಗರು ಸೌಹಾರ್ದತೆ ಕಲಿಯುವ ಅಗತ್ಯವಿಲ್ಲ : ನೀತಾ ಪ್ರಭು
• ಜಿಲ್ಲೆಗೆ ಅತಿಥಿಯಂತೆ ಆಗಮಿಸುವ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೌಹಾರ್ದತೆಯ ಬಗ್ಗೆ ಬೇಜವಾಬ್ದಾರಿ ಹೇಳಿಕೆ ಮುಂದುವರೆಸಿದಲ್ಲಿ ಮಹಿಳಾ ಮೋರ್ಚಾದ ವತಿಯಿಂದ ಪ್ರತಿಭಟನೆ : ಸಂಧ್ಯಾ ರಮೇಶ್
ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ ಹಿಂದೂ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದ ಇಬ್ಬರು ಮುಸ್ಲಿಂ ಮಹಿಳೆಯರು ತಾವು ಹಿಂದೂ ಮಹಿಳೆಯ ನೆರೆಮನೆಯವರು ಬಡ ಮಹಿಳೆಗೆ ಮನೆ ನಿವೇಶನ ನೀಡುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯ ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಬಗ್ಗೆ ಬಿಟ್ಟಿ ಉಪದೇಶ ನೀಡಿದ್ದಾರೆ. ಈ ಘಟನೆಯಲ್ಲಿ ಉಸ್ತುವಾರಿ ಸಚಿವರನ್ನು ಭೇಟಿಯಾಗಲು ಬಂದ ಗಿರಿಜಾ ಶೆಟ್ಟಿಗಾರ್ ರವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡಿರುವ ಅವರ ಪುತ್ರಿಯೇ ಕರೆತಂದಿದ್ದು, ಸಚಿವರ ಮುಂದೆ ಮಾತ್ರ ತಾನು ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ. ಆದರೆ ಅವಸರ ಬುದ್ಧಿಯ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹಿಂದೆ ಮುಂದೆ ಯೋಚಿಸದೇ ಮಾಧ್ಯಮದ ಮುಂದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಭಾಷಣ ಮಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದು, ಉಡುಪಿಯ ಜನತೆ ಸೌಹಾರ್ದತೆಯ ಬಗ್ಗೆ ಬೆಳಗಾವಿಯಿಂದ ಬಂದ ಉಸ್ತುವಾರಿ ಸಚಿವರಿಂದ ಕಲಿಯುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷರಾದ ನೀತಾ ಪ್ರಭು ಹೇಳಿದ್ದಾರೆ.
ಈವರೆಗೆ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದ ಮಹಿಳೆಯರು ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಯಾಮಾರಿಸಿದ್ದಾರೆ.
ಸ್ವಂತ ತಾಯಿಯನ್ನೇ ಪ್ರಚಾರಕ್ಕಾಗಿ ನೆರೆಮನೆಯ ಮಹಿಳೆ ಎಂದು ಹೇಳುವ ವ್ಯಕ್ತಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನಾದರೂ ಜಿಲ್ಲೆಗೆ ಅತಿಥಿಯಾಗಿ ಆಗಮಿಸಿ, ಜಿಲ್ಲೆಯನ್ನು ಸದಾ ನಿರ್ಲಕ್ಷ್ಯ ಮಾಡುವ ಉಸ್ತುವಾರಿ ಸಚಿವರು ತಮ್ಮ ಬಿಟ್ಟಿ ಪ್ರಚಾರದ ತೆವಲಿಗೆ ಬಿಜೆಪಿ ಪಕ್ಷವನ್ನು ಟೀಕಿಸುವ ಕೆಲಸವನ್ನು ಕೈ ಬಿಡಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಶೋಭೆಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಉಡುಪಿ ಜಿಲ್ಲೆಯ 5 ಮಂದಿ ಬಿಜೆಪಿ ಶಾಸಕರು ಹಾಗೂ ಸಂಸದರು ತಮ್ಮ ಬಳಿಗೆ ಸಮಸ್ಯೆಗಳಿಗಾಗಿ ಬರುವ ನಾಗರಿಕರೊಂದಿಗೆ ಜಾತಿ ಧರ್ಮದ ಭೇದ ಭಾವ ತೋರಿಲ್ಲ. ಕೇವಲ ರಾಷ್ಟ್ರೀಯತೆಯ ವಿರೋಧಿಗಳು, ಮತೀಯ ಶಕ್ತಿಗಳ ಬಗ್ಗೆ ಎಂದಿಗೂ ರಾಜಿಯಾಗದೇ ಕೆಲಸ ಮಾಡುವ ಬಿಜೆಪಿ ಜನಪ್ರತಿನಿಧಿಗಳ ಬಗ್ಗೆ ಉಡುಪಿಯ ಜನತೆಗೆ ಹೆಮ್ಮೆ ಇದೆ ಎಂದು ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ನೀತಾ ಪ್ರಭು ಹೇಳಿದ್ದಾರೆ.
ಉಡುಪಿ ಜಿಲ್ಲೆಗೆ ಸದಾ ಅತಿಥಿಯಂತೆ ಆಗಮಿಸಿ, 3 ವರ್ಷಗಳಿಂದ ಜಿಲ್ಲೆಯ ಅಭಿವೃದ್ದಿಗೆ ಎಳ್ಳು ನೀರು ಬಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಅವಿವೇಕದ ಮಾತುಗಳನ್ನು ಹೇಳಿರುವುದು ಅಕ್ಷಮ್ಯ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಜನಪ್ರತಿನಿಧಿಗಳ ವಿರುದ್ಧ ಬೇಜವಾಬ್ದಾರಿ ಹೇಳಿಕೆ ಮುಂದುವರೆಸಿದರೆ ಮಹಿಳಾ ಮೋರ್ಚಾದ ವತಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ರಮೇಶ್ ಹೇಳಿದ್ದಾರೆ.













