ಬೈಂದೂರು: ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನ – ಆರೋಪಿಯ ಬಂಧನ
ಬೈಂದೂರು: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾರ್ಚ್ 18 ರಂದು ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಣಮಕ್ಕಿ ಪ್ರದೇಶದಲ್ಲಿರುವ ಪಾತಿಮಾ ಅಪಾಪಿ (38) ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಪಾತಿಮಾ ಅವರು ಮಲಗಿದ್ದ ವೇಳೆ ಸುಮಾರು 25 ವರ್ಷದ ಅಪರಿಚಿತ ವ್ಯಕ್ತಿಯೊಬ್ಬನು ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿದ್ದಾನೆ.
ಮನೆಯೊಳಗೆ ಪ್ರವೇಶಿಸಿದ ಆತ, ಗೋಡ್ರೇಜ್ ಅಲ್ಮಾರಿಯನ್ನು ತೆರೆದು ವಸ್ತುಗಳನ್ನು ಹುಡುಕಾಡುತ್ತಾ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ, ಪಾತಿಮಾ ಅವರು ಎಚ್ಚರಗೊಂಡು ಬೊಬ್ಬೆ ಹಾಕಿದ ಪರಿಣಾಮ, ಆರೋಪಿ ಹಿಂಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ.
ಈ ಕುರಿತು ಪಾತಿಮಾ ಅವರ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿ ಪೌಜಾನ್ ಅಹ್ಮದ್ ಅನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಈತನ ಮೇಲೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬೈಕ್ ವ್ಹೀಲಿಂಗ್ ಪ್ರಕರಣದಲ್ಲೂ ಆರೋಪವಿರುವುದು ತಿಳಿದುಬಂದಿದೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ, ಬೈಂದೂರು ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ.ವೈ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ಈ ತಂಡದಲ್ಲಿ ಪಿಎಸ್ಐ ನವೀನ್ ಪಿ. ಬೋರಕರ ಹಾಗೂ ಸಿಬ್ಬಂದಿಯಾದ ಹೆಚ್.ಸಿ. ಚಂದ್ರಶೇಖರ, ಪಿಸಿ ಚಿದಾನಂದ, ಪಿಸಿ ಮಾಳಪ್ಪ ದೇಸಾಯಿ ಮತ್ತು ರಾಮದಾಸ್ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.













