ಶಿರ್ವದ ಪಾಪನಾಶಿನಿ ನದಿಗೆ ಜಾನುವಾರು ಕಳೆಬರ ಎಸೆದ ಪ್ರಕರಣ: ಆರೋಪಿ ಬಂಧನ

Spread the love

ಶಿರ್ವದ ಪಾಪನಾಶಿನಿ ನದಿಗೆ ಜಾನುವಾರು ಕಳೆಬರ ಎಸೆದ ಪ್ರಕರಣ: ಆರೋಪಿ ಬಂಧನ

ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಭಾಗದ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಪತ್ತೆಯಾಗಿದ್ದ ಪ್ರಕರಣವನ್ನು ಶಿರ್ವ ಪೊಲೀಸರು ಭೇದಿಸಿದ್ದು, ಜಾನುವಾರನ್ನು ವಧೆ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದ ಆರೋಪಿಯನ್ನು ಬಂಧಿಸಿದ್ದಾರೆ.

ಜೂನ್ 1ರಂದು ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಕಂಡುಬಂದ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಮರಬದ ಅವರು ಕಾಪು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಜಾನುವಾರಿನ ಮೇಲ್ದವಡೆಯ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖೆ ವೇಳೆ ಜಾನುವಾರನ್ನು ಕಡಿದು ಮಾಂಸ ಮಾಡಿ ಅವಶೇಷಗಳನ್ನು ಹೊಳೆಗೆ ಎಸೆದ ಆರೋಪಿಯಾಗಿ ಶಿರ್ವ ಗ್ರಾಮದ ಪದವು ನಿವಾಸಿ, ಬಬ್ಬು ಸ್ವಾಮಿ ದೈವಸ್ಥಾನದ ಸಮೀಪದ ಅಶೋಕ (52) ಎಂಬಾತನನ್ನು ಜೂನ್ 5ರಂದು ಬಂಧಿಸಲಾಗಿದೆ.

ಬಂಧಿತ ಆರೋಪಿಯಿಂದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಶಿರ್ವ ಠಾಣೆಯ ಪಿಎಸ್ಐ ಮಂಜುನಾಥ ಮರಬದ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಲೋಹಿತ್ ಕುಮಾರ್ ಸಿ.ಎಸ್., ಮಂಜುನಾಥ ಅಡಿಗ, ಕಿರಣ್, ಯಲ್ಲಾಲಿಂಗ, ಕಾಪು ಠಾಣೆಯ ರಘು ಹಾಗೂ ಪಡುಬಿದ್ರಿ ಠಾಣೆಯ ರಹಿಮಾನ್ ಮತ್ತು ಸಂದೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments