ಪೆರ್ಡೂರಿನಲ್ಲಿ ಮನರೇಗಾ ವಾಪಸಾತಿಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

Spread the love

ಪೆರ್ಡೂರಿನಲ್ಲಿ ಮನರೇಗಾ ವಾಪಸಾತಿಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ಪೆರ್ಡೂರು: ಯು.ಪಿ.ಎ ಸರಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಾದ ಮನರೇಗಾ ಯೋಜನೆಯ ಹೆಸರು ಹಾಗೂ ಮೂಲ ಸ್ವರೂಪವನ್ನು ಬದಲಾಯಿಸಿ, ಯೋಜನೆಯನ್ನು ದುರ್ಬಲಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಪೆರ್ಡೂರು ಪಂಚಾಯತ್ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೃಷಿಕರು ತಮ್ಮ ಸ್ವಂತ ಜಮೀನಿನಲ್ಲಿ ಬಾವಿ, ಹೈನುಗಾರಿಕೆ, ತೋಟ ನಿರ್ಮಾಣ, ಎಡೆಸಸಿ ಮುಂತಾದ ಕೆಲಸಗಳ ಮೂಲಕ ಸ್ವತಃ ಉದ್ಯೋಗ ನಿರ್ಮಿಸಿಕೊಂಡು ಆದಾಯ ಗಳಿಸುವ ಅವಕಾಶ ನೀಡಿದ ಏಕೈಕ ಯೋಜನೆ ಉದ್ಯೋಗ ಖಾತ್ರಿ ಯೋಜನೆ ಎಂದು ಹೇಳಿದರು.

ಇಂತಹ ಜನಪರ ಹಾಗೂ ಬಡವರ ಬದುಕಿಗೆ ಆಸರೆಯಾದ ಯೋಜನೆಯನ್ನು ರದ್ದುಪಡಿಸುವ ಉದ್ದೇಶ ಕೇಂದ್ರ ಸರಕಾರಕ್ಕೆ ನಾಚಿಕೆಯಾಗಬೇಕು. ಯು.ಪಿ.ಎ ಸರಕಾರ ಬಡವರಿಗೆ 100 ದಿನಗಳ ಕೆಲಸ ನೀಡಿ ಜನಸ್ನೇಹಿ ಸರಕಾರವಾಗಿತ್ತು ಎಂದು ಅವರು ತಿಳಿಸಿದರು.

ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ದೇಶದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಹಾಗೂ ಕೃಷಿಕರಿಗೆ ನೇರವಾಗಿ ಲಕ್ಷಾಂತರ ರೂಪಾಯಿ ಆದಾಯ ತರುವ ಶಕ್ತಿ ಹೊಂದಿರುವ ಯೋಜನೆ ಎಂದರೆ ಅದು ಉದ್ಯೋಗ ಖಾತ್ರಿ ಯೋಜನೆ ಮಾತ್ರ. ಹಳ್ಳಿಗಳ ರಸ್ತೆ, ನೀರು ಸಂರಕ್ಷಣೆ, ಕೃಷಿ ಆಧಾರಿತ ಉದ್ಯೋಗ, ಸ್ವಂತ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳು-ಎಲ್ಲವೂ ಈ ಯೋಜನೆಯ ಫಲವಾಗಿ ಸಾಧ್ಯವಾಗಿದೆ ಎಂದು ಹೇಳಿದರು.

ಬಡವರ ಬದುಕಿಗೆ ಆಸರೆಯಾದ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಗಳನ್ನು ದೇಶದ ಜನತೆ ಒಪ್ಪುವುದಿಲ್ಲ ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಮಂಡಲ ಪ್ರಧಾನ ಶಾಂತಾರಾಮ ಸೂಡರು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತ ರೈ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಪೂಜಾರಿ, ಪೆರ್ಡೂರು ಗ್ರಾಪಂ ಸದಸ್ಯರಾದ ನವೀನ್ ಸಾಲಿಯಾನ್, ದಯಾನಂದ್ ಶೆಟ್ಟಿ, ಶೋಭಾ ಗಾಮ್ಸ್, ಲಕ್ಷ್ಮಿ, ಉದಯ್ ಕುಲಾಲ, ರಾಘವೇಂದ್ರ, ಗಾಯತ್ರಿ, ಜಯಶ್ರೀ ಕುಲಾಲ್, ಎಸ್ಟಿ ಘಟಕದ ಬ್ಲಾಕ್ ಅಧ್ಯಕ್ಷ ರಾಮದಾಸ್ ನಾಯ್ಕ್, ರಾಜು ಸುವರ್ಣ, ಕಾರ್ತಿಕ್ ಆಚಾರ್ಯ, ಶಿವು ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments