ಮೀನುಗಾರ ಮುಖಂಡ ಮಂಜು ಕೊಳಗೆ ಚಾಕು ಇರಿತ ಪ್ರಕರಣ: ನಾಲ್ವರ ಬಂಧನ

Spread the love

ಮೀನುಗಾರ ಮುಖಂಡ ಮಂಜು ಕೊಳಗೆ ಚಾಕು ಇರಿತ ಪ್ರಕರಣ: ನಾಲ್ವರ ಬಂಧನ

ಉಡುಪಿ: ಮಲ್ಪೆ ಬೀಚ್ ಸಮೀಪ ಮೀನುಗಾರ ಮುಖಂಡ ಮಂಜು ಕೊಳ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 3, 2026 ರಂದು ರಾತ್ರಿ ಸುಮಾರು 9.30 ಗಂಟೆಗೆ ಆರೋಪಿಗಳಾದ ಅಮೃತ್ ಭಂಡಾರಿ, ಪ್ರಜ್ಞೇಶ್, ಪುನಿತ್ ಪೂಜಾರಿ ಹಾಗೂ ಅಭೀಜಿತ್ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಂದಿಗೆ ಸೇರಿ, ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿ, ಬೊಲೆರೊ ವಾಹನದಲ್ಲಿ ಮಾರಕಾಯುಧವಾದ ಚಾಕುವನ್ನು ಹೊಂದಿಕೊಂಡು, ಮಲ್ಪೆ ಬೀಚ್ ಸಮೀಪದ ಬ್ಲೂ ವೇವ್ಸ್ ಗೆಸ್ಟ್ ಹೌಸ್ ಬಳಿಗೆ ಬಂದಿದ್ದಾರೆ.

ಬೀಚ್ನ ಮರಳಿನಲ್ಲಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ @ ಮಂಜು ಕೊಳ, ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಅಮೃತ್ ಭಂಡಾರಿಯ ತಂಗಿಯ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಮಂಜು ಕೊಳ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲಾಗಿದೆ.

ಆರೋಪಿ ಪ್ರಜ್ಞೇಶ್, ಮಂಜು ಕೊಳ ಅವರನ್ನು ಕೊಲ್ಲುವ ಉದ್ದೇಶದಿಂದ ತನ್ನ ಪ್ಯಾಂಟ್ ಕಿಸೆಯಲ್ಲಿದ್ದ ಚಾಕುವಿನಿಂದ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದು ತೀವ್ರ ರಕ್ತಗಾಯ ಉಂಟುಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ವರುಣ್ ಹಾಗೂ ಲತೀಶ್ ಮೇಲೆಯೂ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ತಡೆಯಲು ಬಂದ ಸಂತೋಷ್, ಧನುಷ್ ಸೇರಿದಂತೆ ಇತರರ ಮೇಲೂ ಕೈಯಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕುರಿತುಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ಅವರು ಆರೋಪಿಗಳಾದ ಪಲಿಮಾರು ನಿವಾಸಿ ಅಮೃತ್ ಭಂಡಾರಿ (22), ಪ್ರಜ್ಞೇಶ್ (22), ಪುನಿತ್ ಪೂಜಾರಿ (24), ಮತ್ತು ಕಾರ್ಕಳ ಇನ್ನಾ ನಿವಾಸಿ ಅಭೀಜಿತ್ (20), ಇವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಲಾಗುವುದು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಮಲ್ಪೆ ಸಿಪಿಐ ರಾಮಚಂದ್ರ ನಾಯಕ್ ಇವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯ ಹೆಚ್ಸಿ ಆದರ್ಶ್ ಸಹ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments