ಮಾಜಿ ಶಾಸಕ ರಘುಪತಿ ಭಟ್ ಪ್ರತಿಭಟನೆ : ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಶಾಸಕ ಯಶ್ಪಾಲ್ ಸುವರ್ಣ
ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ರವರ ಬಡಾನಿಡಿಯೂರು ಗ್ರಾಮದ ನಿವೇಶನದ ಏಕ ವಿನ್ಯಾಸ ಕಡತದ ಬಗ್ಗೆ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ಆರೋಪ ಮಾಡಿ, ಅಧಿಕಾರಿಗಳ ವಿರುದ್ಧ ಪ್ರತಿಭಟನೆಯ ಬೆದರಿಕೆ ಹಾಕಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗೆ ಪತ್ರ ಬರೆದು ಈ ಬಗ್ಗೆ ಕಾನೂನು ಪ್ರಕಾರ ಕಡತ ವಿಲೇವಾರಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಕ್ಷಣ ಸೂಕ್ತ ನಿರ್ದೇಶನ ನೀಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಶಾಸಕರು ಬರೆದ ಪತ್ರದ ಪೂರ್ಣ ವಿವರ
ಉಡುಪಿ ತಾಲೂಕು ಬಡಾನಿಡಿಯೂರು ಗ್ರಾಮದ ಸರ್ವೇ ನಂಬರ್ 118/2ಎ|ಎ3 ಮತ್ತು 118/2ಬಿ ಯ 0.90 ಎಕರೆ ಜಾಗದಲ್ಲಿ ಉದ್ಯಾನವನ ಹಾಗೂ ಬಯಲು ಜಾಗ ವಲಯದಿಂದ ವಾಣಿಜ್ಯ ವಲಯಕ್ಕೆ ನಿಯಮ ಮೀರಿ ಭೂ ಬದಲಾವಣೆ ಮಾಡಿದ ಜಾಗಕ್ಕೆ ಏಕವಿನ್ಯಾಸ ಕೋರಿದ ಕಡತವನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿಯಮಾನುಸಾರ ತಿರಸ್ಕರಿಸಲ್ಪಟ್ಟಿರುತ್ತದೆ.
ಸದ್ರಿ ಜಾಗದ ಸಮೀಪದಲ್ಲಿರುವ ಕರಾವಳಿ ಯುವಕ ಮಂಡಲ (ರಿ.), ಮೀನುಗಾರರು ಹಾಗೂ ಸಾರ್ವಜನಿಕರು ರೆಸಾರ್ಟ್ ನಿರ್ಮಾಣಕ್ಕೆ ಮೊದಲಿನಿಂದಲೂ ವಿರೋಧ ಮಾಡಿಕೊಂಡು ಬರುತ್ತಿದ್ದಾರೆ (ದೂರುಗಳ ಪ್ರತಿ ಲಗತ್ತಿಸಿದೆ). ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬಯಲು ಜಾಗ ಹಾಗೂ ಉದ್ಯಾನವನಕ್ಕೆ ಮೀಸಲಾಗಿದ್ದ ಜಾಗದಲ್ಲಿ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿರ್ಮಾಣಕ್ಕೆ ನಕಲಿ ದಾಖಲೆಗಳು ಹಾಗೂ ಸುಳ್ಳು ಮಾಹಿತಿಯೊಂದಿಗೆ ಕಡಿಮೆ ಪ್ರಸರಣೆಯುಳ್ಳ ದಿನ ಪತ್ರಿಕೆಯಲ್ಲಿ ಪ್ರಕಟಣೆ ಹೊಡಿಸಿ ಸಾರ್ವಜನಿಕರನ್ನು ಕತ್ತಲಲ್ಲಿರಿಸಿ, ಭೂ ಬದಲಾವಣೆ ಪಡೆಯಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ವರದಿಯಂತೆ 7 ಅಡಿ ಮತ್ತು ತನಿಖಾ ಸಮಿತಿಯ ವರದಿಯಂತೆ 4.6 ಮೀಟರ್ ರಸ್ತೆ ಇರುವಲ್ಲಿ 12 ಮೀಟರ್ (40 ಅಡಿ) ಅಗಲದ ಸಂಪರ್ಕ ರಸ್ತೆಯಿದೆ ಎಂದು ಸುಳ್ಳು ಮಾಹಿತಿ ನೀಡಿ ಪ್ರಕಟಣೆ ನೀಡಲಾಗಿರುತ್ತದೆ.
ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳು ರಚಿಸಿದ ತನಿಖಾ ಸಮಿತಿಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿ ಅವರು “ವಾಸ್ಥವ ಅಂಶಗಳೊಂದಿಗೆ ಸಭೆಗೆ ಮಂಡಿಸದೆ ಇರುವುದರಿಂದ ತಪ್ಪಾಗಿ ಭೂ ಬದಲಾವಣೆಯಾಗಿರುತ್ತದೆ” ಎಂದು ವರದಿ ನೀಡಿರುತ್ತಾರೆ. ಭೂ ಪರಿವರ್ತನೆ ಆದೇಶದೊಂದಿಗೆ ಲಗತ್ತೀಕರಿಸಿದ ನಕ್ಷೆಯು ಭೂಪರಿವರ್ತನೆ ನಕ್ಷೆ ಅಲ್ಲ ಎಂದು ತಿಳಿಸಲಾಗಿದ್ದು, ಈ ಮೂಲಕ ನಕಲಿ ನಕ್ಷೆ ಲಗತ್ತೀಕರಿಸಿರುವುದು ತಹಶೀಲ್ದಾರರ ವರದಿಯಲ್ಲಿಯೂ ಸಾಬೀತಾಗಿರುತ್ತದೆ. ಸದ್ರಿ ವಿಷಯದಲ್ಲಿ ಕಾನೂನು, ನಿಯಮ ಉಲ್ಲಂಘಿಸಿ, ಕರ್ತವ್ಯ ನಿರ್ವಹಿಸಿದ ಹಿಂದಿನ ಉಡುಪಿ ನಗರ ಪ್ರಾಧಿಕಾರದ ಆಯುಕ್ತರಾದ ಮಹೇಶ್ಚಂದ್ರರವರನ್ನು ಸರಕಾರವು ಅಮಾನತ್ತುಗೊಳಿಸಿರುತ್ತದೆ.
ಸರಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಇವರು ದಿನಾಂಕ : 07/03/2025 ರಂದು ಪತ್ರ ಸಂಖ್ಯೆ : ನಅಇ 95 ಮೈಅಪ್ರಾ 2025(ಇ) ರಂತೆ ಮಾನ್ಯ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನ ಆಯುಕ್ತಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಪತ್ರ ಬರೆದು, ಬಡಾನಿಡಿಯೂರು ಗ್ರಾಮದಲ್ಲಿ ನಿರ್ಮಿಸಲು ಹೊರಟಿರುವ ಅಕ್ರಮ ರೆಸಾರ್ಟ್ ಬಗ್ಗೆ ನಿಯಮಾನುಸಾರ ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಿದ್ದರೂ ಈ ಬಗ್ಗೆ ವರದಿ ಸಲ್ಲಿಸಿರುವುದಿಲ್ಲ.
ಸದ್ರಿ ವಿಷಯದ ಬಗ್ಗೆ ಮಾನ್ಯ ಲೋಕಾಯುಕ್ತ, ಬೆಂಗಳೂರಿನಲ್ಲಿ ಪ್ರಕರಣ ಸಂಖ್ಯೆ : Compt/LOK/MYS /4946/2024/ARE-19 ರಂತೆ ದೂರು ದಾಖಲಾಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿರುತ್ತದೆ.
ಅಕ್ರಮ ರೆಸಾರ್ಟ್ ಕುರಿತು ಮಾನ್ಯ ಉಚ್ಚನ್ಯಾಯಾಲಯ, ಬೆಂಗಳೂರಿನಲ್ಲಿ ಕರಾವಳಿ ಯುವಕ ಮಂಡಲ (ರಿ.), ಬಡಾನಿಡಿಯೂರು ಇವರು ವ್ಯಾಜ್ಯ ಸಂಖ್ಯೆ : WP/30441/2025 ರಂತೆ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ದಿನಾಂಕ : 10/02/2026 ರಂದು ತನಿಖಾ ನೋಟೀಸು ಜಾರಿಯಾಗಿದ್ದು, ವಿಚಾರಣೆ ಪ್ರಗತಿಯಲ್ಲಿರುತ್ತದೆ.
ಸದ್ರಿ ಏಕ ವಿನ್ಯಾಸ ಕಡತವು ನಿಯಮಾನುಸಾರ ತಿರಸ್ಕರಿಸಲ್ಪಟ್ಟಿದ್ದು, ಮಾನ್ಯ ಆಯುಕ್ತಾಲಯದ ಆಯುಕ್ತರು ಕಡತದ ಪೂರ್ಣ ಮಾಹಿತಿ ಇಲ್ಲದೇ, ಗೊಂದಲದಿಂದ ಕೂಡಿದ ಆದೇಶ ಹೊರಡಿಸಿದಂತೆ ಕಂಡು ಬಂದಿರುತ್ತದೆ.
ಸ್ಥಳೀಯ ಶಾಸಕನಾಗಿ ಸಾರ್ವಜನಿಕರ ಮನವಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿರುತ್ತದೆ. ದಿನಾಂಕ 12.03.2026 ರಂದು ನಾನು ಪತ್ರ ಬರೆದು ಕೊರಿದ ಸ್ಪಷ್ಟಿಕರಣಗಳಿಗೆ ಯಾವುದೇ ಮಾಹಿತಿ ಲಭಿಸಿರುವುದಿಲ್ಲ. ಪ್ರಸ್ತುತ ಅರ್ಜಿದಾರರು ಅಧಿಕಾರಿಗಳಿಗೆ ಪ್ರತಿಭಟನೆಯ ಬೆದರಿಕೆ ಒಡ್ಡಿ ಒತ್ತಡದ ಮೂಲಕ ಕಾರ್ಯ ಸಾಧಿಸಲು ಹೊರಟಿರುವುದು ನ್ಯಾಯಾಂಗ ಉಲ್ಲಂಘನೆ ಮತ್ತು ದುರುದ್ದೇಶದಿಂದ ಕೂಡಿದ ತಂತ್ರಗಾರಿಕೆಯಾಗಿರುತ್ತದೆ. ಮಾನ್ಯ ಲೋಕಾಯುಕ್ತ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ
ಅಕ್ರಮವೆಂದು ಸಾಬೀತಾದ ಕಡತಕ್ಕೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿ ಆತ್ಮಸ್ಥೆರ್ಯ ಕುಗ್ಗಿಸುವಂತಹ ಬೆಳವಣಿಗೆಗಳು ನಡೆಯುತ್ತಿದೆ. ಕರಾವಳಿ ಯುವಕ ಮಂಡಲ (ರಿ.), ಮೀನುಗಾರರು ಹಾಗೂ ಸಾರ್ವಜನಿಕರು ಇದೇ ರೀತಿ ಪ್ರತಿಭಟನೆಯ ಹಾದಿ ತುಳಿದಲ್ಲಿ ಉಡುಪಿಯ ಘನತೆಗೆ ಚ್ಯುತಿ ಬಂದಂತಾಗುತ್ತದೆ.
ನಗರಾಭಿವೃದ್ಧಿ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸದ್ದರೂ ಈವರೆಗೆ ವರದಿ ನೀಡಿರುವುದಿಲ್ಲ. ಅಲ್ಲದೇ, ಅರ್ಜಿದಾರರು ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಬೇಕೇ ವಿನಹ ಪ್ರತಿಭಟನೆಯ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ನಿರ್ಮಾಣಕ್ಕೆ ಹೊರಟಿರುವುದು ಸರಿಯಲ್ಲ. ಪ್ರತಿಭಟನೆ ನಡೆಸಿದವರಿಗೆ ಕಾನೂನಿನಲ್ಲಿ ರಿಯಾಯಿತಿ ಸಿಗುವುದಿದ್ದಲ್ಲಿ ಅದು ಎಲ್ಲರಿಗೂ ಸಿಗುವಂತಾಗಲಿ. ಮೇಲೆ ತಿಳಿಸಿದಂತೆ ದಾಖಲೆಗಳಲ್ಲಿ ಲೋಪ, ಸೇವೆ ಪಡೆಯುವಲ್ಲಿ ಅಡ್ಡ ದಾರಿ, ಸಾರ್ವಜನಿಕರ ತೀವ್ರ ವಿರೋಧ, ಮಾನ್ಯ ಲೋಕಾಯುಕ್ತಾ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಂತಹ ಸದ್ರಿ ವಿಷಯದಲ್ಲಿ ಪ್ರತಿಭಟನೆ ನಡೆಸಿದವರಿಗೆ ಏಕವಿನ್ಯಾಸ ನೀಡಬಹುದಾದಲ್ಲಿ ಎಲ್ಲರಿಗೂ ಈ ಅವಕಾಶ ಲಭಿಸಲಿ ಎಂದು ಆಶಿಸುತ್ತೇನೆ.
ಆದುದರಿಂದ, ಈ ಎಲ್ಲಾ ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯ ಪಡೆದುಕೊಂಡು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಲು ಸೂಚಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಾಸಕರು ಪತ್ರದ ಮೂಲಕ ಮನವಿ ಮಾಡಿದ್ದಾರೆ.













