ಆನ್ಲೈನ್ ಗ್ಯಾಸ್ ಅಪ್ಡೇಟ್ ಹೆಸರಿನಲ್ಲಿ ವಂಚನೆ: ವೃದ್ಧ ದಂಪತಿಯಿಂದ ₹1.45 ಲಕ್ಷ ದರೋಡೆ
ಉಡುಪಿ: ಆನ್ಲೈನ್ ಗ್ಯಾಸ್ ಪಾವತಿ ಅಪ್ ಡೇಟ್ ಹೆಸರಿನಲ್ಲಿ ವಂಚನೆ ನಡೆಸಿ ವೃದ್ಧ ದಂಪತಿಯ ಬ್ಯಾಂಕ್ ಖಾತೆಯಿಂದ ಸುಮಾರು ₹1.45 ಲಕ್ಷ ಹಣವನ್ನು ಕಳವು ಮಾಡಿದ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಂಖ್ಯೆ 40/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) ಹಾಗೂ ಐಟಿ ಕಾಯ್ದೆಯ 66(D) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ಸಂತೆಕಟ್ಟೆಯಲ್ಲಿರುವ GSJ ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ನಿವಾಸಿ ಲೀಲಿ ಫ್ಲೋರಿನ್ ಡಿಸಿಲ್ವಾ (72) ಅವರು ದೂರು ನೀಡಿದ್ದಾರೆ. ಮಾರ್ಚ್ 11ರಂದು ಬೆಳಿಗ್ಗೆ ಸುಮಾರು 11:30 ಗಂಟೆ ವೇಳೆಗೆ ಮುಂಬೈನ ಮಹಾನಗರ ಗ್ಯಾಸ್ ಲಿಮಿಟೆಡ್ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ದೇವೇಶ್ ಜೋಷಿ ಎಂಬ ವ್ಯಕ್ತಿ ಕರೆ ಮಾಡಿ, ಗ್ಯಾಸ್ ಗೆ ಆನ್ಲೈನ್ ಮೂಲಕ ಪಾವತಿಸಿರುವ ಹಣದ ಅಪ್ಡೇಟ್ ಆಗಿಲ್ಲ ಎಂದು ತಿಳಿಸಿ ವಾಟ್ಸಾಪ್ ಮೂಲಕ “ಮಹಾನಗರ ಗ್ಯಾಸ್ APK” ಎಂಬ ಆಪ್ ಕಳುಹಿಸಿ ಅದನ್ನು ಡೌನ್ಲೋಡ್ ಮಾಡುವಂತೆ ತಿಳಿಸಿದ್ದಾನೆ.
ದೂರುದಾರರು ಆಪ್ ಅನ್ನು ಡೌನ್ಲೋಡ್ ಮಾಡಿದ ಬಳಿಕ ತಾಂತ್ರಿಕ ದೋಷ ಉಂಟಾಗಿದೆ ಎಂದು ಹೇಳಿ ಆರೋಪಿತನು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಮತ್ತೆ ಕರೆ ಮಾಡಿ, ದೂರುದಾರರ ಗಂಡ ಜೆರೋಮ್ ಐಸಾಕ್ಸಿ ಡಿಸಿಲ್ವಾ ಅವರ ಕೆನರಾ ಬ್ಯಾಂಕ್ ಸಂತೆಕಟ್ಟೆ ಶಾಖೆಯ ಖಾತೆ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ.
ನಂತರ ಸುಮಾರು 4 ಗಂಟೆ ವೇಳೆಗೆ ದೂರುದಾರರ ಮೊಬೈಲ್ಗೆ ಸಂದೇಶ ಬಂದಿದ್ದು, ಪರಿಶೀಲಿಸಿದಾಗ ಮುಂಬೈನ ಐಸಿಐಸಿಐ ಬ್ಯಾಂಕ್ ಖಾತೆಯಿಂದ ₹46,636 ಹಾಗೂ ₹29,381 ಹಣ ಕಡಿತಗೊಂಡಿರುವುದು ತಿಳಿದುಬಂದಿದೆ. ಇದೇ ವೇಳೆ ದೂರುದಾರರ ಗಂಡನ ಕೆನರಾ ಬ್ಯಾಂಕ್ ಖಾತೆಯಿಂದ ₹69,005.31 ಹಣವೂ ಕಡಿತಗೊಂಡಿರುವುದು ಕಂಡುಬಂದಿದೆ.
ಈ ಮೂಲಕ ಆರೋಪಿತನು ಗ್ಯಾಸ್ ಪಾವತಿ ಅಪ್ಡೇಟ್ ಹೆಸರಿನಲ್ಲಿ ನಕಲಿ ಆಪ್ ಡೌನ್ಲೋಡ್ ಮಾಡಿಸಿ ದೂರುದಾರರು ಮತ್ತು ಅವರ ಗಂಡನ ಬ್ಯಾಂಕ್ ಖಾತೆಯಿಂದ ಒಟ್ಟು ಸುಮಾರು ₹1,45,022 ಹಣವನ್ನು ವಂಚನೆ ಮೂಲಕ ದೋಚಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.












