ಹಿಂದೂ ಧರ್ಮ ಮತ್ತು ಆರ್‌ಎಸ್‌ಎಸ್ ಎರಡು ವಿಭಿನ್ನ ವಿಷಯಗಳು; ಕೇಳಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು – ಸುನಿಲ್ ಡಿ. ಬಂಗೇರ
ಉಡುಪಿ: ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು “ಹಿಂದೂ ಧರ್ಮವೇ ನೋಂದಣಿಯಾಗಿಲ್ಲ” ಎಂದು ಹೇಳಿರುವುದು ಮೂಲ ಪ್ರಶ್ನೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುನಿಲ್ ಡಿ. ಬಂಗೇರ ತಿಳಿಸಿದ್ದಾರೆ.
ಹಿಂದೂ ಧರ್ಮವು ಒಂದು ಧರ್ಮ. ಆದರೆ ಆರ್‌ಎಸ್‌ಎಸ್ ಒಂದು ಸಂಘಟನೆಯಾಗಿದೆ. ಧರ್ಮ ಮತ್ತು ಸಂಘಟನೆಯನ್ನು ಒಂದೇ ರೀತಿಯಲ್ಲಿ ಪರಿಗಣಿಸುವುದು ಸರಿಯಲ್ಲ. ದೇಶದಲ್ಲಿ ಕಾರ್ಯನಿರ್ವಹಿಸುವ ಅನೇಕ ಟ್ರಸ್ಟ್‌ಗಳು, ಸಂಘಗಳು, ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಕಾನೂನಿನ ಪ್ರಕಾರ ನೋಂದಾಯಿಸಿಕೊಂಡು ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿವೆ.
ಆರ್‌ಎಸ್‌ಎಸ್ ದೇಶದ ಅತಿದೊಡ್ಡ ಸಂಘಟನೆಗಳಲ್ಲಿ ಒಂದೆಂದು ಹೇಳಿಕೊಳ್ಳುವುದಾದರೆ, ಅದರ ಕಾನೂನುಬದ್ಧ ಸ್ಥಿತಿ, ಆಡಳಿತ ವ್ಯವಸ್ಥೆ, ಹಣಕಾಸಿನ ಮೂಲಗಳು, ಸಾರ್ವಜನಿಕ ಹೊಣೆಗಾರಿಕೆ ಹಾಗೂ ಪಾರದರ್ಶಕತೆ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವುದರಲ್ಲಿ ಯಾವುದೇ ಹಿಂಜರಿಕೆ ಇರಬಾರದು.
ಸಚಿವರು ಕೇಳಿರುವ ಪ್ರಶ್ನೆಗಳು ಯಾವುದೇ ಧರ್ಮದ ವಿರುದ್ಧವಾಗಿಲ್ಲ. ಅವು ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ಒಂದು ಸಂಘಟನೆಯ ಕಾನೂನುಬದ್ಧತೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಆದ್ದರಿಂದ ಭಾವನಾತ್ಮಕ ಹೋಲಿಕೆಗಳನ್ನು ಮಾಡುವ ಬದಲು ಕೇಳಿರುವ ಪ್ರಶ್ನೆಗಳಿಗೆ ನೇರವಾಗಿ ಮತ್ತು ವಾಸ್ತವಿಕವಾಗಿ ಉತ್ತರ ನೀಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿದೆ.













