ನಿಜವಾದ ಕಾಳಜಿ ಇದ್ದರೆ 2023ರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತನ್ನಿ – ವೆರೋನಿಕಾ ಕರ್ನೆಲಿಯೋ
ಉಡುಪಿ: ಮಹಿಳೆಯರನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ಅಜೆಂಡಾ ಜಾರಿಗೆ ಮಾಡಲು ಹೊರಟಿರುವ ಕೇಂದ್ರಸರಕಾರಕ್ಕೆ ನಿಜಕ್ಕೂ ಮಹಿಳೆಯರ ಕುರಿತು ಕಾಳಜಿ ಇದ್ದರೆ 2023 ರ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಮಂಡಿಸಲಿ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.
2023 ರಲ್ಲಿ ಮಹಿಳಾ ಮೀಸಲಾತಿಯ ಮಸೂದೆ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟಿದ್ದರೂ ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅನ್ನು ಜಾರಿಗೆ ತರುವ ಪ್ರಯತ್ನವೇ ಮಾಡಿಲ್ಲ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಪ್ರಮುಖ ಆದ್ಯತೆಯಾಗಿಸಿತ್ತು. ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಸರಕಾರ ಮಹಿಳಾ ಮೀಸಲಾತಿಯನ್ನು ಡಿಲಿಮಿಟೇಶನ್ ಮತ್ತು ಜನಗಣತಿ ಪ್ರಕ್ರಿಯೆಗಳೊಂದಿಗೆ ಜೋಡಿಸಿ ದೇಶದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲು ಹೊರಟಿದ್ದು ಇದಕ್ಕೆ ಸಂಸತ್ತಿನಲ್ಲಿ ಸೋಲಾಗಿದೆ.
ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೇಂದ್ರ ಸರಕಾರದ ಪ್ರಯತ್ನಗಳಿಗೆ ಸಂಸತ್ತಿನಲ್ಲಿ ಸೋಲಾಗಿದ್ದು ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಬಿಜೆಪಿಗರು ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಸಂಸತ್ತಿನಲ್ಲಾದ ಸೋಲಿನಿಂದ ಹತಾಶರಾದ ಪ್ರಧಾನಿಗಳು ದೇಶವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾಡಿದ್ದಾರೆ. ಮಹಿಳೆಯರ ಹೆಸರಿನಲ್ಲಿ ತಮ್ಮ ಹಿಡನ್ ಅಜೆಂಡಾ ಜಾರಿಯಾಗಲು ಸಾಧ್ಯವಾಗಿಲ್ಲ ಎಂಬ ನೋವು ಪ್ರಧಾನಿಯವರನ್ನು ಕಾಡಿದೆ. ಪ್ರಧಾನಿಯವರ ಹಾಗೂ ಬಿಜೆಪಿಗರ ಇಂತಹ ನಾಟಕಗಳನ್ನು ನಂಬುವ ಕಾಲ ಇದಲ್ಲ. ಜನರೂ ಕೂಡ ಬುದ್ದಿವಂತರಾಗಿದ್ದಾರೆ. ತಾವು ಮಹಿಳೆಯರ ಉದ್ದಾರಕರು ಎಂದು ಬಿಂಬಿಸಲು ಹೊರಟಿರುವ ಬಿಜೆಪಿಗರಿಗೆ ನಿಜವಾದ ಕಾಳಜಿ ಇದ್ದಲ್ಲಿ ಅದನ್ನು ಕಾರ್ಯದ ಮೂಲಕ ತೋರಿಸಲಿ. ಉನ್ನಾವೋ ಹಾಥ್ರಸ್ ಹಾಗೂ ಮಣಿಪುರದ ಘಟನೆಗಳು ಮಹಿಳೆಯರ ಕುರಿತು ಬಿಜೆಪಿಯ ಕಾಳಜಿಯನ್ನು ಎತ್ತಿ ತೋರಿಸುತ್ತವೆ.
ಬಿಜೆಪಿಗರಿಗೆ ನಿಜವಾಗಿ ಮಹಿಳಾ ಮೀಸಲಾತಿ ಜಾರಿಯಾಗಬೇಕೆನಿಸಿದರೆ 2023 ರ ಕಾಯ್ದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಹಾಗೂ ಈಗಿರುವ ಲೋಕಸಭಾ ಸ್ಥಾನಗಳ ಆಧಾರದಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.













