ಮಾರ್ಚ್ 7 ರಂದು ಐವನ್ ಡಿ’ಸೋಜಾ ನೇತೃತ್ವದ ಇಫ್ತಾರ್ ಸೌಹಾರ್ದ ಕೂಟ, ಸಹಭೋಜನ

Spread the love

ಮಾರ್ಚ್ 7 ರಂದು ಐವನ್ ಡಿ’ಸೋಜಾ ನೇತೃತ್ವದ ಇಫ್ತಾರ್ ಸೌಹಾರ್ದ ಕೂಟ, ಸಹಭೋಜನ

ಮಂಗಳೂರು: “ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಸರ್ವಧರ್ಮೀಯರ ಭಾವೈಕ್ಯತೆಯ ಹಬ್ಬಗಳ ಆಚರಣೆಯ ಅಂಗವಾಗಿ, ಈ ವರ್ಷ 11ನೇ ವರ್ಷದ ರಂಝಾನ್ ಇಫ್ತಾರ್ ಸೌಹಾರ್ಧ ಕೂಟವನ್ನು ಮಾರ್ಚ್ 7ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾ‌ರ್ ಅವರು ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ನಗರದಲ್ಲಿ ದೀಪಾವಳಿ, ಕ್ರಿಸ್ಮಸ್ ಮತ್ತು ರಂಝಾನ್ ಹಬ್ಬಗಳನ್ನು ಸರ್ವಧರ್ಮೀಯರು ಜೊತೆಗೂಡಿ ಆಚರಿಸುವ ಮೂಲಕ ಐವನ್ ಡಿ’ಸೋಜಾ ಅವರು ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ನೀಡುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇದೇ ಶನಿವಾರ (ಮಾರ್ಚ್ 07) ಜೆಪ್ಪು ಮೋರ್ಗನ್ಸ್ ಗೇಟ್‌ನ ಹಾಲೇಮಾರ್ ಗಾರ್ಡನ್‌ನಲ್ಲಿ ಸಂಜೆ 5:00 ಗಂಟೆಗೆ ಇಫ್ತಾರ್ ಸೌಹಾರ್ಧ ಕೂಟ ಮತ್ತು ಧಾರ್ಮಿಕ ಸಭೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕುದ್ರೋಳಿ ಜುಮಾ ಮಸೀದಿಯ ಧರ್ಮಗುರು ಜನಾಬ್ ರಿಯಾಜ್ ಫೈಝಿ ಕಕ್ಕಿಂಜೆ, ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಂಪರ್ಕಾಧಿಕಾರಿ ರೆ|ಫಾ| ಜೆ.ಬಿ. ಸಾಲ್ದಾನಾ, ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಹಾಗೂ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉಪವಾಸ ಬಿಡುವ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಸಹಭೋಜನದ ವ್ಯವಸ್ಥೆ ಇರಲಿದ್ದು, ಸಮಿತಿಯು ಕಾರ್ಯಕ್ರಮದ ಯಶಸ್ವಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ನಾಗೇಂದ್ರ ಕುಮಾರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್.ಪಿ. ಮನುರಾಜ್, ಮನೀಷ್ ಬೋಳಾರ್, ಇಮ್ರಾನ್ ಕುದ್ರೋಳಿ, ಸತೀಷ್ ಪೆಂಗಲ್, ಚಂದ್ರಹಾಸ್ ಪೂಜಾರಿ ಕೋಡಿಕಲ್ ಹಾಗೂ ಮಹಮ್ಮದ್ ನವಾಜ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments