ಅಕ್ರಮ ಅನಿಲ ಸಿಲಿಂಡರ್ ದಾಸ್ತಾನು ಪ್ರಕರಣ: ವ್ಯಕ್ತಿಯ ಬಂಧನ
- ಪರವಾನಿಗೆ ಇಲ್ಲದೆ ವಾಣಿಜ್ಯ ಸಿಲಿಂಡರ್ಗಳ ಸಂಗ್ರಹ ಮತ್ತು ಮಾರಾಟ; 21 ಸಿಲಿಂಡರ್ಗಳು ವಶ
ಉಡುಪಿ: ಅಕ್ರಮವಾಗಿ ಅನಿಲ ಸಿಲಿಂಡರ್ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಪೊಲೀಸರು ಬಂಧಿಸಿ, 21 ವಾಣಿಜ್ಯ ಅನಿಲ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಪೆಯ ಸನತ್ ಕಾಮತ್ ಎಂಬವರು ಪರವಾನಿಗೆ ಇಲ್ಲದೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಮಲ್ಪೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದರು.
ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್ ಸಮೀಪದ ಸನತ್ ಕಾಮತ್ ಅವರ ಮನೆಯ ಆವರಣದಲ್ಲಿ ದಾಳಿ ನಡೆಸಿದ ವೇಳೆ 19 ಕೆ.ಜಿ ಸಾಮರ್ಥ್ಯದ ಅನಿಲ ತುಂಬಿದ ಒಂದು ಸಿಲಿಂಡರ್ ಸೇರಿದಂತೆ ಒಟ್ಟು 12 ವಾಣಿಜ್ಯ ಸಿಲಿಂಡರ್ಗಳು ಹಾಗೂ 5 ಕೆ.ಜಿ ಸಾಮರ್ಥ್ಯದ 9 ವಾಣಿಜ್ಯ ಸಿಲಿಂಡರ್ಗಳು ದಾಸ್ತಾನು ಇರುವುದು ಪತ್ತೆಯಾಯಿತು.
ಈ ಕುರಿತು ಆರೋಪಿಯನ್ನು ವಿಚಾರಿಸಿದಾಗ, ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ಸಿಲಿಂಡರ್ಗಳನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದು, ಈ ಸಂಬಂಧ ಯಾವುದೇ ಪರವಾನಿಗೆ ಅಥವಾ ದಾಖಲೆಗಳನ್ನು ಹೊಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ಶಿರಸ್ತೇದಾರರಾದ ಆಶಾ ಕೆ. ಅವರ ನೇತೃತ್ವದಲ್ಲಿ ಸಿಲಿಂಡರ್ಗಳನ್ನು ಮಹಜರು ಮೂಲಕ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಲಾಯಿತು.
ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 63/2026ರಡಿ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣಾ ನಿಯಂತ್ರಣ) ಆದೇಶ-2000ರ ಕಲಂ 4 ಮತ್ತು 7ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿತ ಸನತ್ ಆರ್. ಕಾಮತ್ (43) ಅವರನ್ನು ಜೂನ್ 3ರಂದು ಮಲ್ಪೆ ಜಂಕ್ಷನ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಯಾವುದೇ ಪರವಾನಿಗೆ ಇಲ್ಲದೆ ಅನಿಲ ಸಿಲಿಂಡರ್ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಶಿರಸ್ತೇದಾರರಾದ ಆಶಾ ಕೆ., ಆಹಾರ ನಿರೀಕ್ಷಕ ಹಿತೇಶ್ ಯು.ಬಿ., ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಅನೀಲ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಭಾಸ್ಕರ, ಆದರ್ಶ, ಸುರೇಶ್, ಆನಂದ, ಕುಬೇರ, ಶರಣಬಸವ ಮತ್ತು ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.













