ಕಡಬ: ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

Spread the love

ಕಡಬ: ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

ಕಡಬ: ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಅಲಂಕಾರು ಗ್ರಾಮದ ಕಜೆ ಎಂಬಲ್ಲಿ ಶನಿವಾರ ಬೆಳಕಿಗೆ ಬಂದಿದೆ.

ಕಡಬ ಅಲಂಕಾರು ನಿವಾಸಿ ಸುಮಲತಾ (42) ನೀಡಿದ ದೂರಿನ ಪ್ರಕಾರ, ಅವರ ಸಂಬಂಧಿಕರಾದ ದಿನೇಶ್ ಮತ್ತು ಸಂಗೀತಾ (40) ದಂಪತಿ ಮಗುವಿನೊಂದಿಗೆ ಕಜೆ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಜೂನ್ 20ರಂದು ಬೆಳಿಗ್ಗೆ ಸಂಗೀತಾ ಅವರ ತವರು ಮನೆಯಿಂದ ದೂರವಾಣಿ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಇದರಿಂದ ಅನುಮಾನಗೊಂಡ ಸಂಬಂಧಿಕರು ಮನೆಗೆ ತೆರಳಿ ಪರಿಶೀಲಿಸಿದ ವೇಳೆ ಮನೆಯ ಬಾಗಿಲು ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿತು.

ಬಳಿಕ ಬಾಗಿಲು ತೆರೆದು ನೋಡಿದಾಗ ದಿನೇಶ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಂಗೀತಾ ಅವರು ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಇಬ್ಬರೂ ಮೃತಪಟ್ಟಿರುವುದು ದೃಢಪಟ್ಟಿದೆ.

ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಿನೇಶ್ ಅವರು ಪತ್ನಿ ಸಂಗೀತಾ ಅವರನ್ನು ಯಾವುದೋ ಆಯುಧದಿಂದ ಹತ್ಯೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 77/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 103(1) ಅನ್ವಯ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ದಿನೇಶ್ ಅವರ ಸಾವಿಗೆ ಸಂಬಂಧಿಸಿ ಯುಡಿಆರ್ ಸಂಖ್ಯೆ 26/2026, ಬಿಎನ್ಎಸ್ಎಸ್ ಕಲಂ 194ರಡಿ ಪ್ರತ್ಯೇಕ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಬಳಿಕ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments