ಕಾರ್ಕಳ | ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಯಶಸ್ವಿ ಸಮಾಪ್ತಿ
ಕಾರ್ಕಳ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಯುತ ಕೃಷ್ಣ ಶೆಟ್ಟಿ ಬಜೆಗೋಳಿ ಅವರ ನೇತೃತ್ವದಲ್ಲಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026 ಮೂರು ದಿನಗಳ ಕಾಲ (ಜನವರಿ 30, 31 ಹಾಗೂ ಫೆಬ್ರವರಿ 1) ಶಾಂತಿ–ಸೌಹಾರ್ದತೆಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕ್ರಿಕೆಟ್ ಪಂದ್ಯಾವಳಿಯ ಮೂಲಕ ದೇಶದ ಏಕತೆ, ಸಹೋದರತ್ವ ಹಾಗೂ “ಭಾರತ್ ಜೋಡೋ” ಎಂಬ ರಾಷ್ಟ್ರೀಯ ಸಂದೇಶವನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ಈ ಟೂರ್ನಿಯನ್ನು ಆಯೋಜಿಸಲಾಗಿತ್ತು. ಉಡುಪಿ, ಮಂಗಳೂರು ಹಾಗೂ ಕಾರ್ಕಳ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಂದ ಆಗಮಿಸಿದ ಯುವ ಕ್ರಿಕೆಟ್ ತಂಡಗಳು ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಸ್ನೇಹಭಾವದೊಂದಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಅರ್ಥಪೂರ್ಣತೆ ನೀಡಿದವು.
ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026ರ ಅಂತಿಮ ಪಂದ್ಯದಲ್ಲಿ ಮಹಾಲಿಂಗೇಶ್ವರ ಕಾರ್ಕಳ ತಂಡ ಶ್ರೇಷ್ಠ ಆಟ ಪ್ರದರ್ಶಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಠಿಣ ಪೈಪೋಟಿ ನೀಡಿದ ಮಂಗಳೂರು ಮೂಲದ ಗೋರಿ ಯಂಗ್ ಬಾಯ್ಸ್ ತಂಡ ರನ್ನರ್ಅಪ್ ಸ್ಥಾನ ಪಡೆದುಕೊಂಡಿತು.
ಪಂದ್ಯಾವಳಿಯ ಸಂದರ್ಭದಲ್ಲಿ ಆಯ್ದ ಹಿರಿಯ ಕಾಂಗ್ರೆಸ್ ನಾಯಕರು, ಯುವ ಕ್ರೀಡಾಪಟುಗಳು ಹಾಗೂ ಕಾರ್ಕಳದ ಹಿರಿಯ ಕ್ರಿಕೆಟ್ ತಂಡಗಳ ಸ್ಥಾಪಕರು ಮತ್ತು ಕಪ್ತಾನ್ನರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ–2026ರ ಅಂಗವಾಗಿ ಕೆಳಕಂಡ ಸಾಧಕರಿಗೆ ಗೌರವ ಸನ್ಮಾನ ನೀಡಲಾಯಿತು:
ಬಿಪಿನ್ ಚಂದ್ರಪಾಲ್ – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸೀತಾರಾಮ – ಮಾಜಿ ಪುರಸಭಾ ಅಧ್ಯಕ್ಷರು, ಕಾರ್ಕಳ, ಅವಿನಾಶ್ ಶೆಟ್ಟಿ – ಗೌರವಾಧ್ಯಕ್ಷರು, ಕ್ರಿಕೆಟ್ ಅಸೋಸಿಯೇಷನ್, ಕಾರ್ಕಳ, ಪವನ್ – 1ನೇ ಏಷ್ಯನ್ ಓಪನ್ ಅಂತಾರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಚಾಂಪಿಯನ್ಶಿಪ್ ಚಿನ್ನದ ಪದಕ ವಿಜೇತ, ನೋಅ ಜೋ ಪಾಯಿಸ್ – ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟು
ಕಾರ್ಕಳದ ಹಿರಿಯ ಕ್ರಿಕೆಟ್ ತಂಡಗಳ ಪ್ರತಿನಿಧಿಗಳಾಗಿ ಸತೀಶ್ ಆಚಾರ್ಯ (ವೆಸ್ಟರ್ನ್ ಕ್ರಿಕೆಟರ್ಸ್), ಗಫೂರ್ (ಬ್ರದರ್ಸ್ ಅಜೆಕಾರ್), ಸುರೇಶ್ ದೇವಾಡಿಗ (ನ್ಯೂಸ್ಟರ್ ಕ್ರಿಕೆಟರ್ಸ್) ಹಾಗೂ ಶರತ್ ಆಂಚನ್ (ಮಹಾಲಿಂಗೇಶ್ವರ) ಅವರನ್ನು ಸನ್ಮಾನಿಸಲಾಯಿತು.
ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ ಕೇವಲ ಕ್ರೀಡಾಕೂಟವಲ್ಲ; ಯುವಜನತೆಯನ್ನು ಒಗ್ಗಟ್ಟಿನ ದಾರಿಯಲ್ಲಿ ಕೊಂಡೊಯ್ಯುವ ಚಳವಳಿಯ ಭಾಗವಾಗಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಆಶಯದಂತೆ, ದೇಶದ ಸಂವಿಧಾನಾತ್ಮಕ ಮೌಲ್ಯಗಳು, ಸಹೋದರತ್ವ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಕಾರ್ಯವನ್ನು ಮುಂದುವರಿಸುವುದಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ತಿಳಿಸಿದೆ.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರು, ಮಾರ್ಗದರ್ಶಕರು, ಗಣ್ಯರು, ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್, ವಿವಿಧ ಸಂಘಟನೆಗಳು, ಪೊಲೀಸ್ ಇಲಾಖೆ, ಮಾಧ್ಯಮ ಪ್ರತಿನಿಧಿಗಳು, ಸ್ವಯಂಸೇವಕರು, ಆಟಗಾರರು ಹಾಗೂ ಪಂದ್ಯಾವಳಿಯನ್ನು ವೀಕ್ಷಿಸಿ ಉತ್ತೇಜನ ನೀಡಿದ ಸಾರ್ವಜನಿಕರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್, ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಎನ್ಎಸ್ಯುಐ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜೆಗೋಳಿ ತಿಳಿಸಿದ್ದಾರೆ.












