ಕಾರ್ಕಳ – ಶಿರ್ವ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ; ಜೂಜಾಟ ಜಾಲದ ಐವರು ಆರೋಪಿಗಳ ಬಂಧನ
ಉಡುಪಿ: ಕಾರ್ಕಳ ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳೊಂದಿಗೆ ಜೂಜಾಟ ಜಾಲ ಆರೋಪಕ್ಕೂ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತರನ್ನು ಕುಂದಾಪುರ ನಾಡ ಗ್ರಾಮದ ಸುದರ್ಶನ್ ಶೆಟ್ಟಿ (29), ಹೇರೂರು ಗ್ರಾಮದ ಕರ್ತವ್ಯ ಶೆಟ್ಟಿ (27), ಬೈಂದೂರು ತಾಲೂಕು ಮುದೂರು ಗ್ರಾಮದ ಅರುಣ್ ಶೆಟ್ಟಿ (29), ಹೆಬ್ರಿ ಬೆಳಂಜೆ ಗ್ರಾಮದ ತೇಜಸ್ (28), ಬೈಂದೂರು ಶಿರೂರು ನಿವಾಸಿ ಪ್ರಜ್ವಲ್ ಶೆಟ್ಟಿ (28) ಎಂದು ಗುರುತಿಸಲಾಗಿದೆ
ಮಾರ್ಚ್ 27 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಹಾಗೂ ಸಿಬ್ಬಂದಿ ಹಂಚಿಕಟ್ಟೆ ಹೋಂಡಾ ಶೋರೂಮ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ KA15Z0007 ಸಂಖ್ಯೆಯ ಕಪ್ಪು ಬಣ್ಣದ ಫಾರ್ಚುನರ್ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದರು.
ಈ ವೇಳೆ ಕಾರಿನಲ್ಲಿದ್ದ ಆರೋಪಿಗಳು — ಸುದರ್ಶನ್, ಕರ್ತವ್ಯ ಶೆಟ್ಟಿ, ಅರುಣ್ ಶ್ರೀಕಾಂತ್ ಮತ್ತು ಶಶಿಕಾಂತ್ — ಪೊಲೀಸ್ ಸಿಬ್ಬಂದಿಯ ಮೇಲೆ ಕಾರು ಹತ್ತಿಸಲು ಯತ್ನಿಸಿ, ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಜೊತೆಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ದಿನ ಮಧ್ಯಾಹ್ನ 3:10 ಗಂಟೆಗೆ ಶಿರ್ವ ಗ್ರಾಮದ ಪದವು ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಮರಬದ ಅವರು, ಬೆಳ್ಮಣ್ ದಿಂದ ಶಿರ್ವ ಕಡೆಗೆ ಅನುಮಾನಾಸ್ಪದವಾಗಿ ಬರುತ್ತಿದ್ದ ಇದೇ ಕಾರನ್ನು ನಿಲ್ಲಿಸಲು ಸೂಚಿಸಿದರು.
ಈ ವೇಳೆ ಚಾಲಕ ವಾಹನವನ್ನು ನಿಧಾನಗೊಳಿಸಿ, ಕಿಟಕಿಯಿಂದ ಪಿರ್ಯಾದಿದಾರರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಶಿರ್ವ ಪೇಟೆಯಲ್ಲಿದ್ದ ಹೆಡ್ ಕಾಂಸ್ಟೇಬಲ್ ವಾಹನವನ್ನು ತಡೆದು ನಿಲ್ಲಿಸಿದರು. ವಿಚಾರಣೆ ವೇಳೆ ಆರೋಪಿಗಳು ತಮ್ಮನ್ನು ಸುದರ್ಶನ್, ಕರ್ತವ್ಯ ಶೆಟ್ಟಿ ಮತ್ತು ಅರುಣ್ ಎಂದು ಪರಿಚಯಿಸಿಕೊಂಡಿದ್ದಾರೆ.
ಇದಲ್ಲದೆ, ಆರೋಪಿಗಳು ಶ್ರೀಕಾಂತ್, ಶಶಿಕಾಂತ್, ಹೆಬ್ರಿಯ ತೇಜಸ್ ಹಾಗೂ ಬೈಂದೂರಿನ ಪ್ರಜ್ವಲ್ ಜೊತೆ ಸೇರಿ ಕ್ರಿಕೆಟ್ ಬೆಟ್ಟಿಂಗ್ ಹೆಸರಿನಲ್ಲಿ ಜನರನ್ನು ವಂಚಿಸಿ ಹಣ ಸಂಗ್ರಹಿಸಿ ಜೂಜಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.













