ಕಾರ್ಕಳ| ಮಿಯಾರು ಕಂಬಳ ಕ್ರಾಸ್ ಬಳಿ ಭೀಕರ ಅಪಘಾತ: ಮೂವರು ಮೃತ್ಯು

Spread the love

ಕಾರ್ಕಳ| ಮಿಯಾರು ಕಂಬಳ ಕ್ರಾಸ್ ಬಳಿ ಭೀಕರ ಅಪಘಾತ: ಮೂವರು ಮೃತ್ಯು

ಕಾರ್ಕಳ: ತಾಲೂಕಿನ ಮಿಯಾರು ಕಂಬಳಕ್ರಾಸ್ ಬಳಿ ಇಂದು (ಜ.23) ಮಧ್ಯಾಹ್ನ ಖಾಸಗಿ ಬಸ್ ಮತ್ತು ತುಫಾನ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಧರ್ಮಸ್ಥಳದಿಂದ ಕಾರ್ಕಳದ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಿಯಾರು ಕಂಬಳಕ್ರಾಸ್ ಬಳಿ ಅತೀ ವೇಗವಾಗಿ ಬಂದು ವಿರುದ್ಧ ದಿಕ್ಕಿನಲ್ಲಿ ನುಗ್ಗಿದೆ ಎನ್ನಲಾಗಿದ್ದ, ಈ ವೇಳೆ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ತೆರಳುತ್ತಿದ್ದ ತುಫಾನ್ ವಾಹನಕ್ಕೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತುಫಾನ್ ವಾಹನವು ಸಂಪೂರ್ಣವಾಗಿ ಜಖಂಗೊಂಡಿದ್ದು, ಅದರಲ್ಲಿದ್ದ ಪ್ರಯಾಣಿಕರು ವಾಹನದೊಳಗೆ ಸಿಲುಕಿಕೊಂಡಿದ್ದರು.

ಮಧ್ಯಾಹ್ನ ಸುಮಾರು 3.30ಕ್ಕೆ ಸಂಭವಿಸಿದ ಈ ದುರ್ಘಟನೆಯಲ್ಲಿ ತುಫಾನ್ನಲ್ಲಿದ್ದ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇತರ ಆರು ಮಂದಿಯನ್ನು ತಕ್ಷಣವೇ ಕಾರ್ಕಳದ ಸರ್ಕಾರಿ ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟವರ ಹಾಗೂ ಗಾಯಗೊಂಡವರ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ನಿವಾಸಿಗಳು ಮತ್ತು ಹಾದಿಹೋಕರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ವಾಹನದೊಳಗೆ ಸಿಲುಕಿದ್ದವರನ್ನು ಹರಸಾಹಸಪಟ್ಟು ಹೊರತೆಗೆದು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದಾರೆ. ಅಪಘಾತದ ಹಿನ್ನೆಲೆಯಲ್ಲಿ ಮಿಯಾರು ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.

ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಸ್ ಚಾಲಕನ ನಿರ್ಲಕ್ಷ್ಯವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


Spread the love
Subscribe
Notify of

0 Comments
Inline Feedbacks
View all comments