ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿ ಚರ್ಚೆಗೆ ಕೇಶವ ಪ್ರಸಾದ್ ಆಗ್ರಹ
ಉಡುಪಿ: ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡುವ ಮುನ್ನ ದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಜಾತಿ ಗಣತಿ ವರದಿಯನ್ನು ನೀಡಿದ್ದು, ಹೊಸದಾಗಿ ರಚನೆಯಾದ ಶಿವಕುಮಾರ್ ನೇತೃತ್ವದ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವರದಿ ಮಂಡಿಸಿ ವಿಶೇಷ ಚರ್ಚೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲಿಗೆ ಕಾಂತರಾಜು ಆಯೋಗ ರಚಿಸಿ 155 ಕೋಟಿ ರೂ. ನೀಡಿದ್ದರು. ನಂತರ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಜಾತಿ ಗಣತಿ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆದಿತ್ತು. ಇದಕ್ಕೆ ರಾಹುಲ್ ಗಾಂಧಿ ತಡೆ ನೀಡಿದ್ದರಿಂದ ಮತ್ತೆ ಮಧುಸೂದನ್ ನಾಯಕ್ ನೇತೃತ್ವದ ಸಮಿತಿಗೆ 600 ಕೋಟಿ ರೂ. ನೀಡಿದ್ದರು. ತರಾತುರಿಯಲ್ಲಿ ಆಯೋಗದ ವರದಿ ಪಡೆದು ಈಗ ಸುಮ್ಮನೆ ಕುಳಿತಿದ್ದಾರೆ. ನೂರಾರು ಕೋಟಿ ರೂ. ತೆರಿಗೆ ಹಣವನ್ನು ಸರ್ಕಾರ ಪೋಲು ಮಾಡುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕಿದೆ. ಕಾಂಗ್ರೆಸ್ ಸರ್ಕಾರ ಇದನ್ನು ಕೇವಲ ‘ಜಾತಿ ಗಣತಿ’ಯಾಗಿ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಿದೆ. ರಾಜ್ಯ ಸರ್ಕಾರ ಮಾಡಿರುವ ಆರ್ಥಿಕ ಸಮೀಕ್ಷೆಯ ವಿವರಗಳನ್ನು ಜನರ ಮುಂದೆ ಮುಕ್ತವಾಗಿ ಇಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರಮುಖರಾದ ಪ್ರವಿಣ್ ಕುಮಾರ್ ಗುರ್ಮೆ, ಶಶಾಂಕ್ ಶಿವತ್ತಾಯ, ಶ್ರೀನಿಧಿ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.













