ಕುಂದಾಪುರ : ಅಕ್ರಮ ಕೊಜೆ ಮಣ್ಣು ಸಾಗಾಟದ ಟಿಪ್ಪರ್ ಅಪಘಾತ ಪ್ರಕರಣ: ಮೂವರ ಬಂಧನ
ಉಡುಪಿ: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಎರಡು ಟಿಪ್ಪರ್ ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಟಿಪ್ಪರ್ ಚಾಲಕರು ಹಾಗೂ ಕೋಜೆ ಮಣ್ಣು ತೆಗೆದ ಸ್ಥಳದ ಮಾಲೀಕ ಸೇರಿದಂತೆ ಮೂವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಟಿಪ್ಪರ್ ಚಾಲಕರಾದ ನಾಗರಾಜ, ರತ್ವೀಜ್ ಹಾಗೂ ಮಣ್ಣು ತೆಗೆದ ಸ್ಥಳದ ಮಾಲೀಕ ಅಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ರಾಜ್ಯ ಹೆದ್ದಾರಿ 52ರಲ್ಲಿ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್ ಲಾರಿಗಳು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಸಂಚರಿಸುತ್ತಿದ್ದವು. ಈ ವೇಳೆ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸನ್ನು ಕಂಡು ಟಿಪ್ಪರ್ ಚಾಲಕ ವೇಗ ಕಡಿಮೆ ಮಾಡಿದ್ದಾನೆ. ಹಿಂದಿನಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್ ಲಾರಿ ಅತಿವೇಗದಿಂದ ಬಂದು ಮೊದಲ ಟಿಪ್ಪರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಬಲಭಾಗಕ್ಕೆ ಚಲಿಸಿದೆ. ಈ ವೇಳೆ ಕಂಡ್ಲೂರಿನಿಂದ ಬಸ್ರೂರು ಕಡೆಗೆ ಕಾಲೇಜಿಗೆ ತೆರಳುತ್ತಿದ್ದ ಸಂಖ್ಯೆಯ ಸ್ಕೂಟರ್‌ಗೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರರಾದ ಟಿ.ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ಕಾರಣವಾದ ಟಿಪ್ಪರ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಕೋಜೆ ಮಣ್ಣನ್ನು ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.













