ದಾಖಲೆ ಪರಿಶೀಲಿಸಿ ಬಳಿಕ ಟೀಕೆ ಮಾಡಲಿ: ದಿನೇಶ್ ಅಮೀನ್ ಹೇಳಿಕೆಗೆ ಮಹೇಶ್ ಠಾಕೂರ್ ತಿರುಗೇಟು
ಉಡುಪಿ: ಮಾಜಿ ಶಾಸಕ ಕೆ. ರಘುಪತಿ ಭಟ್ ವಿರುದ್ಧ ಬಿಜೆಪಿ ನಗರಾಧ್ಯಕ್ಷ ದಿನೇಶ್ ಅಮೀನ್ ನೀಡಿದ ಹೇಳಿಕೆಗೆ ಮಾಜಿ ನಗರಸಭೆ ಅಧ್ಯಕ್ಷ ಮಹೇಶ್ ಠಾಕೂರ್ ತೀವ್ರ ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಮಹೇಶ್ ಠಾಕೂರ್, ರಘುಪತಿ ಭಟ್ ವಿರುದ್ಧ ಆರೋಪ ಮಾಡುವ ಮುನ್ನ ಸಂಬಂಧಿತ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ದಿನೇಶ್ ಅಮೀನ್ ಅವರು ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವರ ಸ್ವಂತ ಮನಸ್ಸಿನ ಮಾತಲ್ಲ, ಬದಲಾಗಿ ಒತ್ತಡದ ಪರಿಣಾಮವಾಗಿ ಹೊರಬಂದವು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ರಘುಪತಿ ಭಟ್ ಅವರಿಗೆ ಸಿಂಗಲ್ ಲೇಔಟ್ ಅನುಮೋದನೆ ನೀಡುವಲ್ಲಿ ವಿಳಂಬಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಅವರ ಹಸ್ತಕ್ಷೇಪ ಇರಲಿಲ್ಲ ಎಂಬ ದಿನೇಶ್ ಅಮೀನ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಅವರು, 2024ರಲ್ಲೇ ಭಟ್ ಅವರು ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದ ಸಮಯದಲ್ಲೇ ಶಾಸಕ ಯಶ್ ಪಾಲ್ ಸುವರ್ಣ ಅವರು ಅವರ ವಿರುದ್ಧ ದೂರು ನೀಡಿದ್ದ ದಾಖಲೆಗಳು ಲಭ್ಯವಿವೆ ಎಂದು ತಿಳಿಸಿದ್ದಾರೆ. ಇದರಿಂದಲೇ ಪಕ್ಷದ ನಾಯಕರ ವಿರುದ್ಧವೇ ದ್ವೇಷಭಾವ ಹೊಂದಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಸಾಮಾನ್ಯ ನಾಗರಿಕರಿಗೆ ಲಭ್ಯವಾಗುವ ಸಿಂಗಲ್ ಲೇಔಟ್ ಅನುಮೋದನೆ ಮೂರು ಬಾರಿ ಶಾಸಕರಾಗಿರುವ ರಘುಪತಿ ಭಟ್ ಅವರಿಗೆ ಸಿಗದಿರುವುದು ಅಸಾಮಾನ್ಯ ಸಂಗತಿ ಎಂದು ಹೇಳಿದ ಮಹೇಶ್ ಠಾಕೂರ್, ಇದರಲ್ಲಿ ಒತ್ತಡದ ಅಂಶವಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ದಿನೇಶ್ ಅಮೀನ್ ಅವರು ಈ ಒತ್ತಡವನ್ನು ಸಮರ್ಥಿಸುತ್ತಾರೆಯೇ ಅಥವಾ ಒತ್ತಡದಡಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು.
ತಾವು ನಗರಾಧ್ಯಕ್ಷರಾಗಿದ್ದ ವೇಳೆ ರಘುಪತಿ ಭಟ್ ಶಾಸಕರಾಗಿದ್ದು, ದಿನೇಶ್ ಅಮೀನ್ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎಂಬುದನ್ನು ಉಲ್ಲೇಖಿಸಿದ ಅವರು, ಭಟ್ ಅವರ ಪಕ್ಷಪರ ಸೇವೆ, ಕೊಡುಗೆ ಹಾಗೂ ವೈಯಕ್ತಿಕ ತ್ಯಾಗಗಳನ್ನು ನಾವು ಸಮೀಪದಿಂದ ಕಂಡಿದ್ದೇವೆ ಎಂದು ಹೇಳಿದರು.
ಜಾತಿ ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸಿರುವುದನ್ನು ತೀವ್ರವಾಗಿ ಖಂಡಿಸಿದ ಮಹೇಶ್ ಠಾಕೂರ್, ರಘುಪತಿ ಭಟ್ ಅವರು ಯಾವತ್ತೂ ಜಾತಿ ಆಧಾರಿತ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದುಳಿದ ವರ್ಗದ ನಾಯಕರಿಗೆ ಅವಕಾಶ ನೀಡುವಲ್ಲಿ ಹಾಗೂ ಅವರನ್ನು ಪ್ರೋತ್ಸಾಹಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
“ಉಡುಪಿ ನಗರಸಭೆಯಲ್ಲಿ ತಮ್ಮ ಜಾತಿಯವರೇ ಅಭ್ಯರ್ಥಿಗಳಿದ್ದರೂ ಹಿಂದುಳಿದ ವರ್ಗದ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಿದ ಉದಾಹರಣೆಗಳಿವೆ. ಹಿಂದುಳಿದ ವರ್ಗದ ನಾಯಕರನ್ನು ವಿಧಾನ ಪರಿಷತ್ ಸೇರಿದಂತೆ ಪಕ್ಷದ ಪ್ರಮುಖ ಹುದ್ದೆಗಳಿಗೆ ತಂದು ಬೆಳೆಸಿದವರು ರಘುಪತಿ ಭಟ್. ಮೀನುಗಾರ ಸಮುದಾಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದವರೂ ಅವರು,” ಎಂದು ಹೇಳಿದರು.
“ರಘುಪತಿ ಭಟ್ ಅವರ ರಾಜಕೀಯ ಅಥವಾ ವೈಯಕ್ತಿಕ ಜೀವನದಲ್ಲಿ ಯಾವತ್ತೂ ಜಾತಿ ಬೇಧದ ಅಂಶ ಕಾಣಿಸಿಕೊಂಡಿಲ್ಲ. ಇಂತಹ ನಾಯಕನ ವಿರುದ್ಧ ಜಾತಿ ಆಧಾರಿತ ಆರೋಪ ಮಾಡಿರುವುದು ಸರಿಯಲ್ಲ,” ಎಂದು ದಿನೇಶ್ ಅಮೀನ್ ಅವರ ಹೇಳಿಕೆಯನ್ನು ಟೀಕಿಸಿದರು.
ಇಂದು ರಘುಪತಿ ಭಟ್ ಅವರಿಗೆ ನ್ಯಾಯ ದೊರೆತಿದ್ದು, ಅವರು ಎಲ್ಲ ಸವಾಲುಗಳನ್ನು ಮೀರಿ ನಿಂತಿದ್ದಾರೆ ಎಂದು ಹೇಳಿದ ಮಹೇಶ್ ಠಾಕೂರ್, “ನಾವು ಶಾಸಕರ ವಿರುದ್ಧ ಇಲ್ಲ. ಆದರೆ ರಘುಪತಿ ಭಟ್ ಅವರೊಂದಿಗೆ ನಿಲ್ಲುತ್ತೇವೆ. ನಾವು ಪಕ್ಷದೊಂದಿಗೆ ಅಧಿಕೃತವಾಗಿ ಇಲ್ಲದಿದ್ದರೂ ಭಾವನಾತ್ಮಕವಾಗಿ ಪಕ್ಷವನ್ನು ಬಿಟ್ಟಿಲ್ಲ,” ಎಂದು ಸ್ಪಷ್ಟಪಡಿಸಿದರು.













