ಪ್ರೀತಿ ನಿರಾಕರಣೆ: ಸೋಮೇಶ್ವರದ ಯುವಕ ಒಮಾನ್‌ನಲ್ಲಿ ಆತ್ಮಹತ್ಯೆ
ಉಳ್ಳಾಲ: ಒಮಾನ್ ನಲ್ಲಿ ಉದ್ಯೋಗದಲ್ಲಿದ್ದ ಸೋಮೇಶ್ವರ ನಿವಾಸಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಿಗ್ಗೆ ನಡೆದಿದೆ.
ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.
ಪುನೀತ್ ಕಳೆದ ಒಂದೂವರೆ ವರ್ಷಗಳಿಂದ ಒಮಾನ್ ನಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಊರಿಗೆ ಬಂದಿದ್ದ ಪುನೀತ್ ಮತ್ತೆ ಒಮಾನ್‌ಗೆ ಮರಳಿದ್ದರು.
ಇವರು ಕಳೆದ ನಾಲ್ಕು ವರ್ಷಗಳಿಂದ ನಗರದ ಉರ್ವಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಪುನೀತ್ ನ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡದೇ ಪ್ರೀತಿಯನ್ನು ನಿರಾಕರಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ನೊಂದ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮೃತ ಪುನೀತ್ ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.













