ಮಂಗಳೂರು| ವಿದ್ಯಾರ್ಥಿಗಳಿಗೆ ಉದ್ಯೋಗದ ಆಮಿಷವೊಡ್ಡಿ ಹಣದ ವಂಚನೆ: ಸಂತ್ರಸ್ತೆಯರು, ವಿದ್ಯಾರ್ಥಿ ಸಂಘಟನೆಗಳ ಆರೋಪ

Spread the love

ಮಂಗಳೂರು| ವಿದ್ಯಾರ್ಥಿಗಳಿಗೆ ಉದ್ಯೋಗದ ಆಮಿಷವೊಡ್ಡಿ ಹಣದ ವಂಚನೆ: ಸಂತ್ರಸ್ತೆಯರು, ವಿದ್ಯಾರ್ಥಿ ಸಂಘಟನೆಗಳ ಆರೋಪ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡುವ ಆಮಿಷವೊಡ್ಡಿ ಅವರಿಂದ ಬಿಸ್ನೆಸ್ ನೆಪದಲ್ಲಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣ ಮಂಗಳೂರು ನಗರದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.

ಆಮಿಷಕ್ಕೆ ಒಳಗಾಗಿರುವ ಸಂತ್ರಸ್ತೆಯರ ಸಮ್ಮುಖದಲ್ಲಿ ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಪ್ರತಿನಿಧಿಗಳು ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಮ್ಮ ಆರೋಪದ ಬಗ್ಗೆ ವಿವರ ನೀಡಿದರಲ್ಲದೆ, ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಆ ಕಂಪನಿಗೆ ಬೀಗ ಹಾಕುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಳಲಿ ಸಾತ್ವಿಕ್ ಮಾತನಾಡಿ, ಕಾಲೇಜಿನ ಅಮಾಯಕ ವಿದ್ಯಾರ್ಥಿಗಳನ್ನು ಕೆಲಸ ಕೊಡಿಸುವ ನೆಪದಲ್ಲಿ ಚೇನ್ ಬಿಸ್ನೆಸ್‌ಗೆ ಸೇರಿಸಿಕೊಂಡು ಬಳಿಕ ವಿದ್ಯಾರ್ಥಿ ಗಳು ನೊಂದು ಆತ್ಮಹತ್ಯೆಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಿವಿಧ ಕಾಲೇಜುಗಳು ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕಂಪನಿಯ ಮೋಸದ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಹಣಕ್ಕಾಗಿ ಮನೆಯವರಿಂದ ನಾನಾ ರೀತಿಯ ನೆಪ ಹೇಳಿರುವುದಲ್ಲದೆ, ಕೆಲ ವಿದ್ಯಾರ್ಥಿಗಳು ಚಿನ್ನವನ್ನು ಒತ್ತೆಯಿರಿಸಿ ಈ ಕಂಪನಿಗೆ ಹಣ ನೀಡಿ ಮೋಸ ಹೋಗಿದ್ದಾರೆ. ಕೆಲ ವಿದ್ಯಾರ್ಥಿಗಳು ಇದೀಗ ಕಂಪನಿಯ ಮೋಸ ಅರಿವಾಗಿ ಅದರಿಂದ ಹೊರ ಬಂದಿದ್ದರೆ ಮತ್ತಷ್ಟು ವಿದ್ಯಾರ್ಥಿಗಳು ಆ ಕಂಪನಿಯ ಬಲೆಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.

ಮಹಾರಾಷ್ಟ್ರ ನಾಸಿಕ್ ಮೂಲದ ಕಂಪನಿ ಇದಾಗಿದ್ದು, ವ್ಯಾಪಾರ ಪರವಾನಿಗೆಯನ್ನೂ ಈ ಕಂಪನಿ ಪಡೆದು ಕೊಂಡಿದೆ. ಆರು ತಿಂಗಳ ಹಿಂದೆಯೂ ಈ ಕಂಪನಿಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್ ವಿಚಾರಣೆ ಯಾಗಿದೆ. ಹಾಗಿದ್ದರೂ ಮತ್ತೆ ವಿದ್ಯಾರ್ಥಿಗಳಿಗೆ ಹಣ ಗಳಿಸುವ ಆಸೆ ಹುಟ್ಟಿಸಿ, ಕೊನೆಗೆ ಮಾನಸಿಕ ಹಿಂಸೆ ನೀಡುತ್ತಿರು ವುದು ಕಂಡು ಬಂದಿದೆ. ಈಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರ ಗಮನಕ್ಕೂ ತಂದು ಆ ಕಂಪನಿ ಮುಚ್ಚುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎನ್‌ಎಸ್‌ಯುಐನ ಮಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಕ್ರಿಸ್ಟನ್ ಮಿನೇಜಸ್ ಹೇಳಿದರು.

ಸಂತ್ರಸ್ತೆ ವಿದ್ಯಾರ್ಥಿನಿ ಮಾತನಾಡಿ ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತೆಯ ಮೂಲಕ ಕಳೆದ ಜೂನ್‌ನಲ್ಲಿ ಕೋರ್ಸ್ ಮೂಲಕ ಉದ್ಯೋಗ ಪಡೆಯುವ ಅವಕಾಶದ ಹಿನ್ನೆಲೆಯಲ್ಲಿ ನಾನು ಆರಂಭದಲ್ಲಿ ಮೂರು ದಿನಗಳ ತರಬೇತಿಗಾಗಿ ಆ ಕಂಪನಿಗೆ ಸೇರಿದ್ದೆ. ಆರಂಭದಲ್ಲಿ ನನ್ನಿಂದ 2500 ರೂ.ಗಳನ್ನು ಪಡೆಯಲಾಯಿತು. ಬಳಿಕ 11000 ಅಥವಾ 51000 ರೂ.ಗಳನ್ನು ಪಾವತಿಸಿ ಅವರು ನೀಡುವ ವಸ್ತುಗಳನ್ನು ಖರೀದಿಸಬೇಕು ಹಾಗೂ ಮತ್ತೆ ಮೂವರನ್ನು ಸೇರ್ಪಡೆಗೊಳಿಸುವ ಮೂಲಕ ಪಾವತಿಸಿದ ಹಣ ವಾಪಾಸು ಕೊಡಿಸುವ ಭರವಸೆ ನೀಡಲಾಯಿತು. ಆರಂಭದಲ್ಲಿ ಇದು ಒಂದು ರೀತಿಯ ವ್ಯವಹಾರ ಎಂದು ನಂಬಿಕೊಂಡು ತಾಯಿ ಬಳಿ ಲ್ಯಾಪ್‌ಟಾಪ್‌ಗಾಗಿ ಹಣ ಕೇಳಿ ಕಂಪನಿಯ ಪ್ರತಿನಿಧಿಗಳಿಗೆ ನೀಡಿದ್ದೆ. ಆದರೆ ನನಗೆ ನೀಡಲ್ಪಟ್ಟ ವಸ್ತುಗಳು ಸರಿ ಇಲ್ಲದಾಗ ನನಗೆ ಅನುಮಾನ ಬಂದು ನನಗೆ ಹಣವನ್ನು ಮರು ಪಾವತಿಸುವಂತೆ ಕೋರಿದರೂ ಹಲವು ಸಮಯದವರೆಗೆ ನನ್ನನ್ನು ಸತಾಯಿಸಲಾಯಿತು. ಈ ನಡುವೆ ತಾಯಿಗೂ ವಿಷಯ ತಿಳಿದಾಗ ಅವರೂ ನನ್ನ ಮೇಲೆ ಬೇಸರ ಮಾಡಿಕೊಂಡಾಗ ಆತ್ಮಹತ್ಯೆಗೂ ಮುಂದಾ ಗಿದ್ದೆ. ನನ್ನ ಸ್ನೇಹಿತೆ ಧೈರ್ಯ ತುಂಬಿದ ಬಳಿಕ ಪೊಲೀಸರಿಗೆ ದೂರು ನೀಡಿ ಕಂಪನಿಯವರನ್ನು ಕರೆಸಿ ಹಣ ಹಿಂತಿರುಗಿಸುವ ಭರವಸೆ ನೀಡಲಾಯಿತು. ಆದರೆ ಅವರು ಮತ್ತೆ ಸತಾಯಿಸಿದಾಗ ಮತ್ತೆ ಆತ್ಮಹತ್ಯೆಯ ದಾರಿ ಹಿಡಿಯಬೇಕಾಯಿತು. ಬಳಿಕ ಹಣ ಮರಳಿ ಪಡೆದಿದ್ದೇನೆ ಎಂದು ಹೇಳಿದರು.

ಇನ್ನೋರ್ವ ಸಂತ್ರಸ್ತೆ ಮಾತನಾಡಿ, ಸಾಫ್ಟ್‌ವೇರ್ ಡೆವಲಪರ್ ಆಗಿ 30000 ರೂ. ವೇತನದ ಉದ್ಯೋಗವೆಂದು ಹೇಳಿ ನನ್ನ ಸ್ನೇಹಿತೆ ನನ್ನನ್ನು ಆ ಕಂಪನಿಗೆ ಸೇರಿಸಿದ್ದಳು. ಕೇವಲ ಆಧಾರ್ ಕಾರ್ಡ್ ಮಾತ್ರವೇ ಪಡೆಯಲಾಗಿತ್ತು. ತರಬೇತಿ ಸಮಯದಲ್ಲಿ ಅಲ್ಲಿ ಒಬ್ಬರಿಗೊಬ್ಬರು ಮಾತನಾಡುವಂತಿಲ್ಲ. ಹೀಗೆ ತಂಡ ತಂಡವಾಗಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಅವರ ಕುಟುಂಬದ ಹಿನ್ನೆಲೆ ತಿಳಿದುಕೊಂಡು ಮರಳು ಮಾಡಿ ಹಣ ನೀಡಲು ಒತ್ತಾಯಿಸಲಾ ಗುತ್ತದೆ. ಉದ್ಯೋಗದ ಆಸೆ ಹಾಗೂ ಉತ್ತಮ ಸಂಪಾದನೆಯ ಭರವಸೆಯಲ್ಲಿ ವಿದ್ಯಾರ್ಥಿಗಳು ಈ ಕಂಪನಿಯ ಜಾಲಕ್ಕೆ ಬೀಳುತ್ತಿದ್ದಾರೆ ಎಂದು ಆರೋಪಿಸಿದರು.

ಈಗಲೂ ಆ ಕಂಪನಿಯಲ್ಲಿ ಸುಮಾರು 40 ಮಂದಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಪೊಲೀಸರು ಸೇರಿದಂತೆ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ವಹಿಸೇಕು. ಆ ಕಂಪನಿಗೆ ಬಾಡಿಗೆ ನೀಡಿರುವ ಕಟ್ಟಡದ ಮಾಲಕರ ಬಗ್ಗೆಯೂ ಅನುಮಾನವಿದ್ದು, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಬೇಕು ಎಂದು ಸಾತ್ವಿಕ್ ಒತ್ತಾಯಿಸಿದರು.


Spread the love
Subscribe
Notify of

0 Comments
Inline Feedbacks
View all comments