ಕೋಕಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮನೋಜ್ ಕೋಡಿಕೆರೆ, ಚೇತು ಪಡೀಲ್ ಬಂಧನ
ಕೋಟ: ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಕಾ (KCOCA) ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಮಾಹಿತಿ ನೀಡಿದ ಬಾತ್ಮೀದಾರರಿಗೆ ಘೋಷಿಸಲಾಗಿದ್ದ ನಗದು ಬಹುಮಾನವನ್ನು ಪೊಲೀಸ್ ಇಲಾಖೆ ವಿತರಿಸಿದೆ.
ಕೋಟ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 208/2025ರ ಕೋಕಾ ಕಾಯ್ದೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆ ಹಾಗೂ ಚೇತನ್ @ ಚೇತು ಪಡೀಲ್ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಸಾರ್ವಜನಿಕರಿಂದ ಮಾಹಿತಿ ಕೋರಿದ್ದ ಪೊಲೀಸರು, ಮಾಹಿತಿ ನೀಡುವವರಿಗೆ ₹50,000 ನಗದು ಬಹುಮಾನ ಘೋಷಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು.
ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿ ಚೇತನ್ @ ಚೇತು ಪಡೀಲ್ನನ್ನು 2026ರ ಏಪ್ರಿಲ್ 30ರಂದು ಹಾಗೂ ಮತ್ತೋರ್ವ ಆರೋಪಿ ಮನೋಜ್ ಕುಲಾಲ್ @ ಮನೋಜ್ ಕೋಡಿಕೆರೆಯನ್ನು 2026ರ ಜೂನ್ 11ರಂದು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ನೆರವಾದ ಬಾತ್ಮೀದಾರರಿಗೆ ಘೋಷಿಸಿದ್ದ ನಗದು ಬಹುಮಾನವನ್ನು ಪೊಲೀಸ್ ಇಲಾಖೆಯಿಂದ ವಿತರಿಸಲಾಗಿದೆ.
ಅಪರಾಧ ತಡೆ ಹಾಗೂ ಅಪರಾಧಿಗಳ ಪತ್ತೆ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದ್ದಾಗಿದ್ದು, ಮುಂದೆಯೂ ಇದೇ ರೀತಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.













