ಅಪ್ರಾಪ್ತರಿಗೆ ಮದ್ಯ-ಹುಕ್ಕಾ ಸೇವನೆಗೆ ಅವಕಾಶ; ಮಣಿಪಾಲದ ಬಾರ್-ಪಬ್ ಗಳ ಮೇಲೆ ಪೋಲಿಸರ ದಾಳಿ: 6 ಪ್ರಕರಣ ದಾಖಲು

Spread the love

ಅಪ್ರಾಪ್ತರಿಗೆ ಮದ್ಯ-ಹುಕ್ಕಾ ಸೇವನೆಗೆ ಅವಕಾಶ; ಮಣಿಪಾಲದ ಬಾರ್-ಪಬ್ ಗಳ ಮೇಲೆ ಪೋಲಿಸರ ದಾಳಿ: 6 ಪ್ರಕರಣ ದಾಖಲು

ಉಡುಪಿ: ಅಪ್ರಾಪ್ತರು ಹಾಗೂ 21 ವರ್ಷದೊಳಗಿನ ಯುವಕ-ಯುವತಿಯರಿಗೆ ಬಾರ್ ಮತ್ತು ಪಬ್ಗಳಲ್ಲಿ ಮದ್ಯಪಾನ ಹಾಗೂ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆರು ಬಾರ್ ಮತ್ತು ಪಬ್ಗಳ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದು, ಒಟ್ಟು ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಉಡುಪಿ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳನ್ನು ಒಳಗೊಂಡ ಆರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಣಿಪಾಲ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್., ತನಿಖಾ ಪಿಎಸ್‌ಐ ಶಂಭುಲಿಂಗಯ್ಯ ಎಂ.ಇ., ಮಲ್ಪೆ ಠಾಣೆಯ ಪಿಎಸ್‌ಐ ಅನೀಲಕುಮಾರ್ ಡಿ., ಹಿರಿಯಡ್ಕ ಠಾಣೆಯ ಪಿಎಸ್‌ಐ ಪುನೀತ್ ಕುಮಾರ್ ಬಿ.ಇ., ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಹಾಗೂ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಶೈಲ ಡಿ.ಎಂ. ಅವರ ನೇತೃತ್ವದಲ್ಲಿ ಸುಮಾರು 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ದಾಳಿಯ ವೇಳೆ ಮಣಿಪಾಲದ ECSTASY 7th Heaven Pub, Down The Road Bar & Restaurant, Dexter Bar & Restaurant ಹಾಗೂ ಈಶ್ವರನಗರದ Sai Sagar Bar & Restaurant (Noch on Top Resto Bar), Dee Tee Bar & Restaurant ಮತ್ತು Janani Bar & Restaurant (Edge Bar & Restaurant) ಸೇರಿದಂತೆ ಒಟ್ಟು ಆರು ಬಾರ್ ಹಾಗೂ ಪಬ್ಗಳನ್ನು ಪರಿಶೀಲಿಸಲಾಯಿತು.

ಪರಿಶೀಲನೆ ವೇಳೆ 21 ವರ್ಷದೊಳಗಿನ 64 ಯುವಕರು, 23 ಯುವತಿಯರು ಹಾಗೂ 17 ವರ್ಷದ ಓರ್ವ ಅಪ್ರಾಪ್ತ ಬಾಲಕ ಬಾರ್ಗಳಲ್ಲಿ ಮದ್ಯ ಸೇವಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಹಜರು ನಡೆಸಿ, ಸಂಬಂಧಿಸಿದ ವರದಿಯನ್ನು ಮಣಿಪಾಲ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದ್ದು, ಬಾರ್ ಹಾಗೂ ಪಬ್ಗಳ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಒಟ್ಟು ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಅಪ್ರಾಪ್ತರು ಹಾಗೂ 21 ವರ್ಷದೊಳಗಿನ ಯುವಕ-ಯುವತಿಯರಿಗೆ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪ್ರವೇಶ ನೀಡಿ ಮದ್ಯಪಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಸಂಬಂಧಿತ ಬಾರ್ ಮತ್ತು ರೆಸ್ಟೋರೆಂಟ್ಗಳ ಪರವಾನಗಿಯನ್ನು ಅಮಾನತುಗೊಳಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಕೋಟ್ಪಾ ಕಾಯ್ದೆ ಹಾಗೂ ಕರ್ನಾಟಕ ಅಬಕಾರಿ ಲೈಸೆನ್ಸ್ ನಿಯಮಾವಳಿಗಳನ್ನು ಉಲ್ಲಂಘಿಸಿ 21 ವರ್ಷದೊಳಗಿನವರಿಗೆ ಪ್ರವೇಶ ನೀಡಿ ಮದ್ಯ ಮಾರಾಟ ಮಾಡುವ ಬಾರ್ ಹಾಗೂ ಪಬ್ಗಳ ವಿರುದ್ಧ ಮುಂದೆಯೂ ಇಂತಹ ವಿಶೇಷ ದಾಳಿ ಮುಂದುವರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


Spread the love
Subscribe
Notify of

0 Comments