ಯಶಪಾಲ್ ಸುವರ್ಣರೇ, ಶಾಸಕತ್ವದ ಘನತೆ, ಮರ್ಯಾದೆಯನ್ನು ಅರಿತು ಮಾತನಾಡಿ: ಗೀತಾ ವಾಗ್ಳೆ
ಉಡುಪಿ: ಶಾಸಕರಾದ ಯಶಪಾಲ್ ಸುವರ್ಣ ಅವರೇ, ಒಬ್ಬ ಶಾಸಕರಾಗಿ ಸಾರ್ವಜನಿಕವಾಗಿ ಮಾತನಾಡುವಾಗ ನಿಮ್ಮ ಸ್ಥಾನದ ಘನತೆ ಹಾಗೂ ಗೌರವಗಳನ್ನು ಅರಿತು ಮಾತನಾಡಿ. ಆ ಗೌರವ ಘನತೆ ನಿಮಗೆ ಇಲ್ಲದೇ ಇರಬಹುದು.ಆದರೆ ನಿಮಗೆ ಸಿಕ್ಕಿರುವ ಆ ಸ್ಥಾನಕ್ಕೆ ಅದರದೇ ಆದ ಮಹತ್ವ, ಮರ್ಯಾದೆ, ಘನತೆಗಳಿವೆ. ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ ಹೇಳಿದ್ದಾರೆ.
ಯಾವುದೇ ಶಿಸ್ತು, ವಿನಯ, ಯೋಗ್ಯತೆ ನಿಮ್ಮಲ್ಲಿ ಇಲ್ಲದಿದ್ದರೂ ಕ್ಷೇತ್ರದ ಜನ ನಿಮ್ಮನ್ನು ಆರಿಸಿರುವುದು ಉಡುಪಿಯ ದುರ್ದೈವ.ಆದರೂ ಶಾಸಕನಾಗಿ ಆಯ್ಕೆಯಾದ ಬಳಿಕವೂ ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನುವಂತೆ ನೀವು ಇನ್ನೂ ನಿಮ್ಮ ಮೊದಲಿನ ಚಾಳಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೀರಿ.ಶಾಸಕರೇ,ಜನರಿಂದ ಆಯ್ಕೆಯಾದ ನಂತರ ನೀವು ಮನಬಂದಂತೆ ಮಾತನಾಡಿದರೆ ನಿಮ್ಮನ್ನು ಆರಿಸಿದವರ ಗೌರವ ಏನಾಗಬೇಕು? ನಿಮ್ಮ ನಿಘಂಟಿನಲ್ಲಿ ಗೌರವ, ನಾಚಿಕೆ, ಘನತೆ ,ಮರ್ಯಾದೆ ಈ ಶಬ್ದಗಳೇ ಇಲ್ಲವೆನ್ನುವುದು ನಮಗೂ ಗೊತ್ತು.ಎಂದವರು ಹೇಳಿದ್ದಾರೆ.
ರಾಹುಲ್ ಗಾಂಧೀಯವರ ಹಾಗೂ ಪ್ರಕಾಶ್ ರಾಜ್ ಅವರ ವಂಶವನ್ನು ನಾಶಮಾಡುತ್ತೇನೆಂದು ನಿನ್ನೆಯ ಪ್ರತಿಭಟನೆಯಲ್ಲಿ ನಿಮ್ಮ ದ್ವೇಷವನ್ನು ಯೆಥೇಚ್ಛವಾಗಿ ಉಗುಳಿದ್ದೀರಲ್ಲವೇ?ಆ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಉಚ್ಛರಿಸುವ ಅರ್ಹತೆಯಾದರೂ ನಿಮಗಿದೆಯಾ ಎಂದು ಯೋಚನೆ ಮಾಡಿದ್ದೀರಾ ? ರಾಷ್ಟ್ರ ಮಟ್ಟದ ಒಬ್ಬ ಮೇರು ನಾಯಕ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಗಿರುವ ಸನ್ಮಾನ್ಯ ರಾಹುಲ್ ಗಾಂಧೀಯವರೆಲ್ಲಿ? ಗೂಂಡಾಗಿರಿ ನಡೆಸುತ್ತಲೇ ಪ್ರಮಾದವೋ ಎಂಬಂತೆ ಆಯ್ಕೆಯಾದ, ಯಕಶ್ಚಿತ್ ಶಾಸಕರಾದ ನೀವೆಲ್ಲಿ? ರಾಹುಲ್ ಗಾಂಧಿ ಅವರ ವಂಶ ನಾಶಮಾಡಲು ನೀವ್ಯಾರು?ಗೂಂಡಾಗಿರಿ ನಿಮ್ಮ ವೃತ್ತಿಯಾಗಿರಬಹುದು.ಆದರೆ ನಿಮ್ಮ ಈ ಗೂಂಡಾಗಿರಿ ಉಡುಪಿಯಲ್ಲಿ ಇದುವರೆಗೆ ನಡೆದಿರಬಹುದು.ದೆಹಲಿ ತನಕ ನಡೆಯಲು ಸಾಧ್ಯವಿಲ್ಲ. ನಮ್ಮ ನಾಯಕರ ಹಿಂದೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿಗೆ ಹೋಗಿ ನೈತಿಕ ಬೆಂಬಲವನ್ನು ಒಬ್ಬ ಶಾಸಕನಾಗಿ ನೀವು ನೀಡಬೇಕಾಗಿತ್ತು. ಆದರೆ ವಿದ್ಯಾರ್ಥಿಗಳನ್ನೇ ಮನಬಂದಂತೆ ನಿಂದಿಸಿದ ನಿಮ್ಮನ್ನು ಒಬ್ಬ ಶಾಸಕನೆಂದು ಕರೆಯುವುದಕ್ಕೂ ನಾಚಿಕೆಯಾಗುತ್ತಿದೆ.
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅರಾಜಕತೆ ಸೃಷ್ಟಿಸಿದ್ದು ವಿದ್ಯಾರ್ಥಿಗಳು ಎಂದಿದ್ದೀರಲ್ಲವೇ?ಅವರ ಮೇಲೆ ಪೋಲೀಸರು ಹಲ್ಲೆ ಮಾಡಿದ್ದು ,ಹಲವು ವಿದ್ಯಾರ್ಥಿಗಳು ಆಸ್ಪತ್ರೆ ಯಲ್ಲಿರುವುದು ಮತ್ತು ಕೆಲವು ವಿದ್ಯಾರ್ಥಿಗಳನ್ನು ವಿನಾ ಕಾರಣ ಬಂಧಿಸಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?ಇನ್ನಾದರೂ ಯದ್ವಾತದ್ವಾ ಮಾತನಾಡಿ ನಿಮ್ಮ ಮರ್ಯಾದೆಯನ್ನು ನೀವೇ ಕಳೆದುಕೊಂಡು ನಗೆ ಪಾಟಲಾಗಬೇಡಿ.ನಿಮ್ಮ ಮತದಾರರೇ ನಿಮ್ಮ ವರ್ತನೆಯಿಂದ ಬೇಸತ್ತು ಕಲ್ಲು ಎಸೆಯುವ ಮುನ್ನ ನಿಮ್ಮ ವರ್ತನೆಯನ್ನು, ನಡತೆಯನ್ನು ತಿದ್ದಿಕೊಳ್ಳಿ ಎಂದು ಗೀತಾ ವಾಗ್ಳೆಯವರು ಎಚ್ಚರಿಕೆ ನೀಡಿದ್ದಾರೆ.ಇದರ ಜೊತೆಗೆ ಶಾಸಕರ ಈ ದುರಹಂಕಾರಿ ವರ್ತನೆಗೆ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗೀತಾ ವಾಗ್ಳೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.













