ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಮಂಗಳೂರು: ಅಪ್ರಾಪ್ತ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬೂಬಕ್ಕರ್ (50) ಎಂಬಾತನಿಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರಾಕ್ ಸ್ಪೆಷಲ್ ಕೋರ್ಟ್ (FTSC-2) 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.50,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.135/2025ರಡಿ ಕಲಂ 64(1), 351(2) BNS ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 4(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಶಿವಕುಮಾರ ಬಿ. ಅವರು ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಫಾಸ್ಟ್ ಟ್ರಾಕ್ ಸ್ಪೆಷಲ್ ಕೋರ್ಟ್ (FTSC-2) ನಲ್ಲಿ ನಡೆಯಿತು. ವಿಚಾರಣೆ ಪೂರ್ಣಗೊಂಡ ಬಳಿಕ 07-03-2026 ರಂದು ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.50,000 ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.
ಪ್ರಕರಣದಲ್ಲಿ ಶ್ರೀಮತಿ ಸಹನದೇವಿ ಅವರು ವಿಶೇಷ ಸರಕಾರಿ ಅಭಿಯೋಜಕರಾಗಿ ಸಮರ್ಥವಾಗಿ ವಾದ ಮಂಡಿಸಿದರು. ತನಿಖೆಗೆ ಸಹಾಯಕರಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್ಟೇಬಲ್ 345 ಪ್ರಶಾಂತ್ ಕುಮಾರ್ ಹಾಗೂ ನ್ಯಾಯಾಲಯ ಕರ್ತವ್ಯ ಸಿಬ್ಬಂದಿಯಾಗಿ ಪಿಸಿ 445 ಸಂತೋಷ್ ಡಿ. ಜಾಧವ ಅವರು ಸಹಕರಿಸಿದರು.













