ಸಿದ್ದರಾಮಯ್ಯ ಅವರದ್ದು ಅಭಿವೃದ್ಧಿಗೆ ಅನುದಾನ ನೀಡದ ಚೊಂಬು ಸರಕಾರ : ಸುನಿಲ್ ಕುಮಾರ್
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಗಂಧ ಗಾಳಿಯಿಲ್ಲದ ಬೊಗಳೆ ಬಜೆಟ್ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಮಂಡಿಸಿದ ಬಜೆಟ್ ನಲ್ಲಿ ಕರಾವಳಿ ಜಿಲ್ಲೆಯನ್ನು ಸಂಪೂರ್ಣ ಹೊರಗಿಟ್ಟು, ಜಿಲ್ಲೆಯ ನಿರಂತರ ಕಡೆಗಣನೆ ಮಾಡಿರುವುದರ ವಿರುದ್ದ ಉಡುಪಿ ನಗರ ಬಿಜೆಪಿ ವತಿಯಿಂದ ಶನಿವಾರ ಉಡುಪಿಯ ಆದರ್ಶ ಆಸ್ಪತ್ರೆ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಸರಕಾರ ಗ್ಯಾರಂಟಿಗಳನ್ನು ನೀಡುವುದೇ ಅಭಿವೃದ್ಧಿ ಎಂದು ಹೇಳಲು ಹೊರಟಿದೆ. ಜಿಲ್ಲೆಯ ಐದು ಮಂದಿ ಶಾಸಕರು ಹಲವಾರು ಬಾರಿ ಜಿಲ್ಲಾಡಳಿತವನ್ನು ಅಭಿವೃದ್ಧಿ ವಿಚಾರದಲ್ಲಿ ಎಚ್ಚರಿಸಿದ್ದರೂ ಕೂಡ ಯಾವುದೇ ಯೋಜನೆಗಳಿಗೆ ಸರಕಾರ ಅನುದಾನ ನೀಡುತ್ತಿಲ್ಲ. ಜಿಲ್ಲೆಯ ಸಮಸ್ಯೆಗಳಿಗೂ ಸ್ಪಂದನೆ ನೀಡದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ 10000 ರೂಗಳಿಗೆ ಸಿಗುತ್ತಿದ್ದ ಮರಳಿನ ದರ ಇಂದು ವಿಪರೀತ ಏರಿಕೆಯಾಗಿದೆ. 25 ರೂಪಾಯಿಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ 50 ರೂಪಾಯಿ ಆಗಲು ಕಾಂಗ್ರೆಸ್ ಸರಕಾರ ನೇರ ಕಾರಣವಾಗಿದೆ. ಇಂತಹ ಕೆಟ್ಟವಾತಾವರಣದ ಆಡಳಿತವನ್ನು ಕರಾವಳಿಯ ಜನತೆ ಎಂದೂ ಕೂಡ ಕಂಡಿಲ್ಲ.
ಬಡವರಿಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರತಿ ಗ್ರಾ ಪಂಚಾಯತ್ ಗಳಿಗೆ 50 ಮನೆಗಳು ಸಿಗುತ್ತಿದ್ದವು ಆದರೆ ಈ ಸರಕಾರದಲ್ಲಿ ಕನಿಷ್ಠ ಒಂದು ಮನೆ ಕೂಡ ಸಿಗುತ್ತಿಲ್ಲ 9&11 ಸಮಸ್ಯೆ, ಪ್ರಾಧಿಕಾರದ ಸಮಸ್ಯೆ, ಕನ್ವರ್ಷನ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಪರಿಹಾರ ಕಂಡಿಲ್ಲ ಇಷ್ಟೊಂದು ಸಮಸ್ಯೆಗಳಿದ್ದರೂ ಕೂಡ ಅದನ್ನು ಪರಿಹಾರ ಮಾಡಬೇಕೆಂಬ ಕನಿಷ್ಟ ಜವಾಬ್ದಾರಿ ಸರಕಾರಕ್ಕೆ ಇಲ್ಲ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಯೊಬ್ಬರಿಗೂ ತಿಳಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಉಡುಪಿ ಪರ್ಯಾಯಕ್ಕೆ ರಾಜ್ಯ ಸರಕಾರಕ್ಕೆ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರದ್ದು ಅಭಿವೃದ್ಧಿಗೆ ಅನುದಾನವೇ ನೀಡದ ಚೊಂಬು ಸರಕಾರ. ಮುಂಬರುವ ಚುನಾವಣೆಗಳಲ್ಲಿ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಜನರ ಮುಂದಿಡುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಸಿದ್ದರಾಮಯ್ಯ ಕರಾವಳಿಯ ಮಟ್ಟಿಗೆ ದ್ವೇಷ ರಾಜಕೀಯವನ್ನು ಮಾಡುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಪೈಪೋಟಿ ನಡೆಸುವುದರಲ್ಲೇ ಮಗ್ನರಾಗಿದ್ದಾರೆ. ಸಾಲವನ್ನು ಮಾಡಿದ್ದು ಬಿಟ್ಟರೆ ಬಜೆಟ್ ನಲ್ಲಿ ಕರಾವಳಿಯ ಅಭಿವೃದ್ಧೀಗೆ ಯಾವುದೇ ರೀತಿಯ ಅನುದಾನವನ್ನು ನೀಡಿಲ್ಲ. ಹಿಂದೆ ಬಿಜೆಪಿ ಸರಕಾರಗಳಿದ್ದಾಗ ಕರಾವಳಿಯ ಅಭಿವೃದ್ದಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟರೆ ಕಾಂಗ್ರೆಸ್ ಸರಕಾರ ಕನಿಷ್ಠ 5% ಅನುದಾನ ಕೂಡ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ನೀಡಿಲ್ಲ. ಇರಾನ್ ಯುದ್ದದ ಸಂದರ್ಭದಲ್ಲಿ ಗ್ಯಾಸ್ ಬೆಲೆ ಏರಿಕೆಯಾಗಿರುವುದಕ್ಕೆ ಉಡುಪಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸಿಗರಿಗೆ ಯಾವ ವಿಚಾರಕ್ಕೆ ಪ್ರತಿಭಟನೆ ನಡೆಸಬೇಕು ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಮುಖಂಡರುಗಳಾದ ಉದಯ್ ಕುಮಾರ್ ಶೆಟ್ಟಿ,ಪ್ರಭಾಕರ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಕಿರಣ್ ಕುಮಾರ್, ರಶ್ಮೀತಾ ಬಾಲಕೃಷ್ಣ ಶೆಟ್ಟಿ ಹಾಗೂ ಇತರರು ಉಪಸ್ಥೀತರಿದ್ದರು.













