ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರಿಂದ ಸರ್ವಜ್ಞ ಪೀಠಾರೋಹಣ

Spread the love

ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರಿಂದ ಸರ್ವಜ್ಞ ಪೀಠಾರೋಹಣ

ಉಡುಪಿ: ಶೀರೂರು ಮಠದ 31ನೇ ಯತಿಯಾಗಿರುವ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜ.18ರ ಮುಂಜಾನೆ ಸರ್ವಜ್ಞ ಪೀಠವೇರಿ ಶ್ರೀಕೃಷ್ಣಮಠದ ಕೃಷ್ಣಪೂಜಾ ಕೈಂಕರ್ಯವನ್ನು ಮುಂದಿನ ಎರಡು ವರ್ಷ ನೆರವೇರಿಸಲಿದ್ದಾರೆ. ಪ್ರಯಾಯೋತ್ಸವವು ಉಡುಪಿ ಲಕ್ಷಾಂತರ ಭಕ್ತಸಾಗರದ ಸಂಭ್ರಮೋತ್ಸವಕ್ಕೆ ಸಾಕ್ಷಿಯಾಯಿತು.

ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಭಾನುವಾರ (ಜ.18) ಪ್ರಾತಃ ಕಾಲ 1.15ಕ್ಕೆ ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದರು.ಪ್ರಾತಃ ಕಾಲ 2ಕ್ಕೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೈರವಣಿಗೆ ಪ್ರಾರಂಭವಾಯಿತು. ಈ ವೇಳೆ ಲಕ್ಷಾಂತರ ಭಕ್ತರು ರಸ್ತೆಯ ಇಕ್ಕೆಲದಲ್ಲಿ ಕಿಕ್ಕಿರಿದು ಸೇರಿದ್ದರು.
ಬೆಳಗ್ಗೆ 5.15 ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ ಮಾಡಿದರು.

ಅದ್ದೂರಿ ಪರ್ಯಾಯ ಮುಗಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೆಳಗ್ಗೆ 5:45ಕ್ಕೆ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಶ್ರೀ ಸರ್ವಜ್ಞ ಪೀಠಾರೋಹಣದಲ್ಲಿ ಕುಳ್ಳಿರಿಸಿದರು. ಶ್ರೀ ವೇದವರ್ಧನ ತೀರ್ಥರು ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.

ಬೆಳಗ್ಗೆ 5:55ಕ್ಕೆ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರ ದಾಯಿಕ ದರ್ಬಾರ್ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ನಡೆಯಿತು.

ಬೆಳಗ್ಗೆ 6.15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಆರಂಭವಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದ ಯದುವೀರ್ ಒಡೆಯರ್ ಸೇರಿ ಅಷ್ಟ ಮಠದ ಯತಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದರು.

ಪರ್ಯಾಯ ದರ್ಬಾರ್ ವೇಳೆ ಆಶೀರ್ವಚನ ನೀಡಿದ ವೇದವರ್ಧನ ತೀರ್ಥ ಸ್ವಾಮೀಜಿ ನಮಗಿದು ಮೊದಲ ಪರ್ಯಾಯ, ಮುಂದಿನ ಶ್ರೀ ಕೃಷ್ಣನ ಪೂಜೆ ಯ ಎರಡು ವರ್ಷದ ಅವಧಿಗೆ ಹೆಜ್ಜೆಗೂ ಮಠಗಳ ಹಿರಿಯ ಯತಿಗಳ ಮಾರ್ಗದರ್ಶನ ಬೇಕು, ಭಕ್ತರ ಸಹಕಾರ ಬೇಕು ಎಂದು ಹೇಳಿದರು.

“ಪರ್ಯಾಯದ ಅವಧಿಯಲ್ಲಿ ಶ್ರೀ ಕೃಷ್ಣನ ಪೂಜೆ ಮಾಡುವುದು ದೊಡ್ಡ ಯಾಗ ಮಾಡಿದಂತೆ. ಉಡುಪಿಯ ಶ್ರೀ ಕೃಷ್ಣ ಸಾಮಾನ್ಯ ಕೃಷ್ಣ ಅಲ್ಲ. ಅವನ ಕೈಯಲ್ಲಿ ಕಡಗೋಲು ಮತ್ತು ಹಗ್ಗವಿದೆ. ಇದಕ್ಕೆ ವಿಶೇಷ ಮಹತ್ವವಿದೆ. ಸಾಕ್ಷಾತ್ ಪ್ರಾಣದೇವರ ಅವತಾರವಾದ ಮಧ್ವಾಚಾರ್ಯರು ಪ್ರತಿಷ್ಠಾಪನೆ ಮಾಡಿದುದಕ್ಕೆ ವಿಶೇಷ ಅರ್ಥವಿದೆ. ನಿತ್ಯ ಪೂಜೆ ಆಗಬೇಕು ಎಂದಲ್ಲ, ಕೃಷ್ಣನ ಸಂದೇಶ ಜಗತ್ತಿಗೆ ಸಾರಬೇಕು ಎಂದು.ಕೃಷ್ಣ ನುಡಿದಂತೆ ಜನರ ಸೇವೆ, ಜನಾರ್ದನ ನ ಸೇವೆ ಆಗಬೇಕು ಎಂದರು.

“ಎಲ್ಲದರೊಳಗೆ ಪರಮಾತ್ಮ ಇದ್ದಾನೆ ಎಲ್ಲರನ್ನೂ ಪ್ರೀತಿಸಬೇಕು. ಜನರ ಸಂತೋಷ ಪಡಿಸಬೇಕು. ಕೃಷ್ಣನ ಸೇವೆ ಮಾಡಿದಾಗ ನೀವು ತಪ್ಪು ಮಾಡುವುದಿಲ್ಲ, ಪೂಜೆಗೆ ನಿಸ್ವಾರ್ಥ ಭಾವವಿರಬೇಕು. ಆರಾಧನೆ ಒಂದು ತುಳಸಿ ದಳ ಸಾಕು. ಹನುಮಂತ ದೇವರು ಸಂಜೀವಿನಿ ಪರ್ವತವನ್ನು ಒಂದು ಕೈಯಲ್ಲಿ ತಂದದ್ದು ಆದರೆ ದೇವರ ಪೂಜೆಗೆ ಎರಡು ಕೈಯಲ್ಲಿ ಹೂವು ತಂದದ್ದು ಎಂದು ಹೇಳಿದರು.

ರಾಮಾಯಣ, ಮಹಾಭಾರತಕ್ಕೂ ಮುನ್ನ ಇದ್ದ ವೇದಗಳನ್ನು ಉಳಿಸಬೇಕಾದ ಕೆಲಸವನ್ನು ನಾವೆಲ್ಲಾ ಮಾಡಬೇಕು ಎಂದು ಸಂದೇಶ ನೀಡಿದರು.

ಮೊದಲ ಪರ್ಯಾಯ ನಡೆಸುತ್ತಿರುವ ನಮಗೆ ಹೆಜ್ಜೆಗೂ ಮಾರ್ಗದರ್ಶನ ಬೇಕು. ಸೋದೆ ಶ್ರೀಪಾದರು ಸನ್ಯಾಸಾಶ್ರಮ ನೀಡಿದ ಮೇಲೆಯೇ ಕೃಷ್ಣನ ಪೂಜೆ ಮಾಡಬೇಕೆಂದು ತಿಳಿದದ್ದು, ಎಲ್ಲ ಭಕ್ತರೂ ಪರ್ಯಾಯದ ಅವಧಿಯಲ್ಲಿ ಸುಧಾರಿಸಬೇಕು ಎಂದು ಆಶೀರ್ವಚನ ನೀಡಿದರು.

ಬೆಳಗ್ಗೆ 10.30ಕ್ಕೆ ಶ್ರೀಕೃಷ್ಣ ದೇವರ ಮಹಾಪೂಜೆ, ಪಲ್ಲಪೂಜೆ ಮಧ್ಯಾಹ್ನ 12ಕ್ಕೆ ಭೋಜನ ಪ್ರಸಾದ ನಡೆಯಲಿದೆ.


Spread the love
Subscribe
Notify of

0 Comments
Inline Feedbacks
View all comments