ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಕಾರ್ಯಕ್ರಮಕ್ಕೆ ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಭೇಟಿ
ಉಡುಪಿ: ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶ ಕಟ್ಟುವ ಕೆಲಸ ನಡೆಯಬೇಕು ಎಂದು ಭಾವೀ ಶೀರೂರು ಪರ್ಯಾಯ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದೇಶ ನೀಡಿದರು.
ಶಿರೂರು ಮಠದ ಹಿಂದಿನ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗಳು, ಆಸ್ಕರ್ ಫೆರ್ನಾಂಡಿಸ್ ಅವರು ಸಮಾಜ ಸೇವೆಗೆ ಹೆಚ್ಚಿನ ಒತ್ತು ನೀಡಿ ಈ ಮೂಲಕ ಜನರ ಮನಸ್ಸುಗಳನ್ನು ಗೆದ್ದಿದ್ದರು. ಪರೋಪಕಾರರ್ಥಂ ಇದಂ ಶರೀರಂ ಎಂಬಂತೆ ಸಮಾಜ ಸೇವೆಗೆ ಪ್ರತಿಯೊಬ್ಬರು ಒತ್ತು ಕೊಡುವುದರ ಮೂಲಕ ಸಮೃದ್ಧ ಭಾರತದ ಕನಸನ್ನು ನನಸು ಮಾಡುವ ಕೆಲಸ ನಡೆಯಲಿ. ತಮ್ಮ ಪರ್ಯಾಯದ ಅವಧಿಯಲ್ಲಿ ಇದು ನಮ್ಮ ಪರ್ಯಾಯ ಎಂಬಂತೆ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ, ಆಸ್ಕರ್ ಅಭಿಮಾನಿ ಬಳಗದ ಯತೀಶ್ ಕರ್ಕೆರಾ, ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ವಿಶ್ವಾಸ್ ಅಮೀನ್, ನವೀನ್ ಸಾಲಿಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಮ್ ಎ ಗಫೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಹಾಗೂ ಇತರರು ಉಪಸ್ಥಿತರಿದ್ದರು.

ಬೆಳಗಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಚಾಲನೆ ನೀಡಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ವಿವಿಧ ತಾಲೂಕುಗಳಿಂದ ಭಜನಾ ತಂಡಗಳು ಕುಣಿತ ಭಜನೆಯನ್ನು ಪ್ರದರ್ಶಿಸಿದರು, ಮಧ್ಯಾಹ್ನ 3 ಗಂಟೆಗೆ ರಾಜ್ಯ ಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ನಡೆಯಿತು.












