ಗೋಧಾಮದಿಂದ ಸಮಾಜಕ್ಕೆ ಅತ್ಯುತ್ತಮ ಸಂದೇಶ : ಡಾ. ಜಿ. ರಾಮಕೃಷ್ಣ ಆಚಾರ್
ಮುನಿಯಾಲು: ಕೃಷಿಲೋಕ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಪಾರಂಪರಿಕ ಸಂಪ್ರದಾಯದಂತೆ ದೊಂಡಿ ಬೆಳಕಿನಲ್ಲಿ ಭಕ್ತಿಭಾವಪೂರ್ಣವಾಗಿ ನಡೆದ ಏಕಪವಿತ್ರ ಶ್ರೀಮನ್ನಾಗಮಂಡಲ ಕಾರ್ಯಕ್ರಮ ಸಮಾಜಕ್ಕೆ ಅತ್ಯುತ್ತಮ ಸಂದೇಶ ರವಾನಿಸಿದೆ ಎಂದು ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಹೇಳಿದರು.
ಸೋಮವಾರ ನಡೆದ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಅವರು, ಸರ್ವರ ಒಗ್ಗಟ್ಟಿನ ಸೇವೆಯಿಂದ ಈ ಮಹತ್ವದ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಇದು ದಾಖಲೆಯ ಸಾಧನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜದಲ್ಲಿ ಯಾವುದೇ ಕಾರ್ಯಗಳನ್ನು ಕೈಗೊಳ್ಳುವಾಗ ಪಂಚಭೂತಗಳ ರಕ್ಷಣೆಯನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಅದೇ ಪರಿಸರ ಹಾಗೂ ಸಮಾಜಕ್ಕೆ ನೀಡುವ ಮಹತ್ತರ ಕೊಡುಗೆಯಾಗುತ್ತದೆ. ಅಂತಹ ಪುಣ್ಯದ ಕಾರ್ಯ ಗೋಧಾಮದ ಮಣ್ಣಿನಲ್ಲಿ ಎಲ್ಲರ ಸಹಕಾರದಿಂದ ನಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ಸಾಣೂರುಗುತ್ತು ದೇವಿಪ್ರಸಾದ ಶೆಟ್ಟಿ ಮಾತನಾಡಿ, ಎರಡು ತಿಂಗಳ ನಿರಂತರ ಶ್ರಮದ ಫಲವಾಗಿ ಶ್ರೀಮನ್ನಾಗಮಂಡಲ ಯಶಸ್ವಿಯಾಗಿ ನೆರವೇರಿದೆ. 25 ಸಾವಿರಕ್ಕೂ ಅಧಿಕ ಭಕ್ತರು ಯಾವುದೇ ಗೊಂದಲವಿಲ್ಲದೆ ಅನ್ನಪ್ರಸಾದ ಸ್ವೀಕರಿಸಿರುವುದು ದಾಖಲೆಯ ಸಂಗತಿಯಾಗಿದೆ. ಎಲ್ಲರೂ ತಮ್ಮದೇ ಕಾರ್ಯಕ್ರಮವೆಂದು ಸೇವೆ ಸಲ್ಲಿಸಿದ್ದರಿಂದ ಯಶಸ್ಸು ಸಾಧ್ಯವಾಯಿತು. ಶ್ರಮಿಸಿದ ಎಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ ಎಂದರು.
ಮುಖಂಡರಾದ ಮುನಿಯಾಲು ದಿನೇಶ ಪೈ, ಮುನಿಯಾಲು ಗೋಪಿನಾಥ ಭಟ್, ಡಾ. ಕೆ. ಸುದರ್ಶನ್ ಹೆಬ್ಬಾರ್, ಜ್ಯೋತಿ ಹರೀಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಸೇರಿದಂತೆ ಹಲವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುನಿಯಾಲು ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ವರಂಗ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಸಂತೋಷ ಅಮೀನ್, ಕಡ್ತಲ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಸುಕೇಶ್ ಹೆಗ್ಡೆ, ಬೆಳುವಾಯಿ ಸುಂದರ ಆಚಾರ್ಯ, ಸಮೃದ್ಧಿ ಪ್ರಕಾಶ ಶೆಟ್ಟಿ, ಸತೀಶ ಪೂಜಾರಿ ಎಳ್ಳಾರೆ ಹಾಗೂ ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ನಾಗಮಂಡಲದ ವಿವಿಧ ಸಮಿತಿಗಳ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.













