ಸೋನಂ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಸ್ಪಂದಿಸಲಿ : ಜೆಪಿ ಹೆಗ್ಡೆ
ಉಡುಪಿ: ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ಹಾಗೂ ಲಡಾಖ್ ಜನರಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕೆಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಸ್ಪಂದಿಸಬೇಕೆಂದು ಮಾಜಿ ಸಂಸದ ಹಾಗೂ ಹಿರಿಯ ರಾಜಕೀಯ ಮುಖಂಡ ಕೆ. ಜಯಪ್ರಕಾಶ್ ಹೆಗ್ಡೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಚುಕ್ ಸುಮಾರು ಮೂರು ವಾರಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅದು ವೈಯಕ್ತಿಕ ಲಾಭಕ್ಕಾಗಿ ಅಲ್ಲ; ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಲಡಾಖ್ ಜನರ ನ್ಯಾಯಯುತ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ತಿಳಿಸಿದ್ದಾರೆ.
ಸೋನಂ ವಾಂಗ್ಚುಕ್ ಸಾಮಾನ್ಯ ವ್ಯಕ್ತಿಯಲ್ಲ. ವೃತ್ತಿಪರ ಎಂಜಿನಿಯರ್ ಆಗಿದ್ದ ಅವರು ಉತ್ತಮ ಉದ್ಯೋಗದ ಅವಕಾಶಗಳನ್ನು ತ್ಯಜಿಸಿ ಲಡಾಖ್‌ನ ಜನರ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಸರ್ಕಾರಿ ಶಾಲೆಗಳ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಿದ್ದು, ಸಮಾಜಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಪಾರ ಕೊಡುಗೆಗಾಗಿ ಅವರಿಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ನೀರಿನ ಸಂರಕ್ಷಣೆ ಹಾಗೂ ಕೃತಕ ಹಿಮನದಿಗಳ ನಿರ್ಮಾಣ ಕ್ಷೇತ್ರದಲ್ಲಿನ ಅವರ ಕಾರ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಹೋರಾಟದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರೂ, ಬಿಡುಗಡೆಯಾದ ಬಳಿಕವೂ ಶಾಂತಿ, ಅಹಿಂಸೆ ಹಾಗೂ ಭಾರತದ ಸಂವಿಧಾನದ ಚೌಕಟ್ಟಿನಲ್ಲಿಯೇ ತಮ್ಮ ಹೋರಾಟವನ್ನು ಮುಂದುವರಿಸುತ್ತಿರುವುದು ಪ್ರಶಂಸನೀಯ ಎಂದು ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ ಅವರ ಒಪ್ಪಿಗೆಯಿಲ್ಲದೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ವರದಿಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಅವರು ಎತ್ತಿರುವ ನ್ಯಾಯಸಮ್ಮತ ಪ್ರಶ್ನೆಗಳಿಗೂ ಸರ್ಕಾರ ಸ್ಪಂದಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ಗಂಭೀರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮುಕ್ತ ಚರ್ಚೆ ನಡೆಯಬೇಕು. ಕೇಂದ್ರ ಸರ್ಕಾರದ ಪ್ರತಿನಿಧಿಗಳು ಜಂತರ್ ಮಂತರ್‌ಗೆ ತೆರಳಿ ಸೋನಂ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳೊಂದಿಗೆ ನೇರ ಮಾತುಕತೆ ನಡೆಸಬೇಕು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ದೇಶದ ಯುವಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಹಾಗೂ ಲಡಾಖ್ ಜನರಿಗೆ ನೀಡಿದ ಭರವಸೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಸ್ಪತ್ರೆಯಲ್ಲಿರುವ ಸೋನಂ ವಾಂಗ್ಚುಕ್ ಅವರ ಆರೋಗ್ಯದ ಕುರಿತು ಕುಟುಂಬ ಸದಸ್ಯರು ಹಾಗೂ ದೇಶದ ಜನತೆಗೆ ಪಾರದರ್ಶಕ ಮಾಹಿತಿ ನೀಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜನಪರ ಹೋರಾಟಗಳಿಗೆ ಸ್ಪಂದಿಸಿ ಮಾತುಕತೆ ನಡೆಸುವುದರಿಂದ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಆದರೆ ನಿರ್ಲಕ್ಷ್ಯ ಹಾಗೂ ಮೌನ ಮುಂದುವರಿದರೆ ದೇಶದ ಯುವಜನರ ವಿಶ್ವಾಸಕ್ಕೆ ಧಕ್ಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಇದೇ ವೇಳೆ, ಸೋನಂ ವಾಂಗ್ಚುಕ್ ಅವರಿಗೆ ಮನವಿ ಮಾಡಿರುವ ಕೆ. ಜಯಪ್ರಕಾಶ್ ಹೆಗ್ಡೆ, ದೇಶದಾದ್ಯಂತ ಅವರ ಸಂದೇಶ ತಲುಪಿರುವುದರಿಂದ ವೈದ್ಯರ ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ದೇಶಕ್ಕೆ ಮುಂದೆಯೂ ಅವರ ಸೇವೆ, ಚಿಂತನೆ ಹಾಗೂ ಧ್ವನಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಉಪವಾಸವನ್ನು ಸತ್ಯ ಮತ್ತು ನ್ಯಾಯಕ್ಕಾಗಿ ಬಳಸುವ ಅಹಿಂಸೆಯ ಅತ್ಯಂತ ಶಕ್ತಿಯುತ ಅಸ್ತ್ರ ಎಂದು ಹೇಳಿದ್ದರು. ಅಧಿಕಾರದಲ್ಲಿರುವವರು ಜನರ ಮಾತುಗಳನ್ನು ವಿನಮ್ರತೆಯಿಂದ ಆಲಿಸಿ ಪ್ರಾಮಾಣಿಕ ಸಂವಾದಕ್ಕೆ ಮುಂದಾದಾಗ ಮಾತ್ರ ಇಂತಹ ಹೋರಾಟಗಳು ಸಾರ್ಥಕವಾಗುತ್ತವೆ. ಆ ಮನೋಭಾವ ಸರ್ಕಾರದಲ್ಲಿ ಮೂಡಲಿ ಎಂಬುದು ತಮ್ಮ ಆಶಯ ಎಂದು ಕೆ. ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.













