ನಾವುಂದ ಬಳಿ ಕಾರಿಗೆ ಟ್ರಕ್ ಢಿಕ್ಕಿ: ತಾಯಿ- ಮಗಳು ಸ್ಥಳದಲ್ಲೇ ಸಾವು
- ಸರಣಿ ರಜೆ ಹಿನ್ನೆಲೆ ದೇವಸ್ಥಾನಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ಮರಳುತ್ತಿರುವಾಗ ದುರ್ಘಟನೆ.
ಕುಂದಾಪುರ: ಟ್ರಕ್ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ-ಮಗಳು ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಬೆಂಗಳೂರಿನ ನೆಲಮಂಗಲ ನಿವಾಸಿ ರಾಘು ಎಂಬವರ ಪತ್ನಿ ಮಮತಾ (36), ಪುತ್ರಿ ಧೃತಿಕ (14) ಮೃತ ದುರ್ದೈವಿಗಳು.
ಇನ್ನೊರ್ವ ಮಗಳು ಜಾಹ್ನವಿ (12) ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಘು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಲ್ಲೇಶ್ವರಂ ನಿವಾಸಿ ಕಿರಣ್ ಕುಮಾರ್ (40) ಗಂಭೀರ ಗಾಯಗಳೊಂದಿಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿರಣ್ ಪುತ್ರಿ ಚಾರ್ವಿ (10) ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿರಣ್ ಅವರ ಪತ್ನಿ ಕಾವ್ಯ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಸರಣಿ ರಜೆ ಹಿನ್ನೆಲೆ ದೇವಾಲಯ ಭೇಟಿ:
ಕಿರಣ್ ಹಾಗೂ ರಾಘು ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗದಲ್ಲಿದ್ದು, ಸರಣಿ ಸರ್ಕಾರಿ ರಜೆ ನಿಮಿತ್ತ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ಬಳಿಕ ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ವಾಪಸ್ ಬೆಂಗಳೂರಿಗೆ ಸಾಗುತ್ತಿದ್ದಾಗ ಈ ಅಪಘಾತ ನಡೆದಿದೆ.
ಕಾರು ನಾವುಂದ ಸಮೀಪಿಸುತ್ತಿದ್ದಂತೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗಿಜ್ಜಾಗಿದೆ. ಅಪಘಾತದ ತೀವ್ರತೆಗೆ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂಹೆಚ್ಐ ತುರ್ತು ಸ್ಪಂದನ:
ಘಟನಾಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಎಂ ಎಚ್ ಐ ತುರ್ತು ಸ್ಪಂದನ ತಂಡವು ಎರಡು ಅಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಹಾಗೂ ಮೃತದೇಹಗಳನ್ಜು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆ ಸಾಗಿಸಲು ನೆರವಾಯಿತು. ತುರ್ತುಸ್ಪಂದನಾ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ಪ್ರಶಾಂತ ನಾಯಕವಾಡಿ ಕಾರಿನಲ್ಲಿ ಸಿಲುಕಿಕೊಂಡವರನ್ನು ಸಾರ್ವಜನಿಕರ ಸಹಕಾರಿಂದ ಹೊರತೆಗೆಯಲು ಶ್ರಮಿಸಿದರು.
ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿ ಸುನಿಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.













