ಉಳ್ಳಾಲ: ಸ್ನಾನಕ್ಕೆ ತೆರಳಿದ್ದ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಉಳ್ಳಾಲ: ಸ್ನಾನಕ್ಕೆಂದು ಮನೆಯ ಕೋಣೆಗೆ ತೆರಳಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ತಾಲೂಕಿನ ಸೋಮೇಶ್ವರ ಬಸ್ ತಂಗುದಾಣದ ಸಮೀಪ ಭಾನುವಾರ ಸಂಜೆ ನಡೆದಿದೆ.
ಸೋಮೇಶ್ವರ ಬಸ್ ತಂಗುದಾಣದ ಬಳಿಯ ನಿವಾಸಿ ಶಾಂತಿ ಅವರ ಪುತ್ರಿ ಸಮನ್ವಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆಕೆ ಸೋಮೇಶ್ವರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಭಾನುವಾರ ಸಂಜೆ ಮನೆಯಲ್ಲಿ ತಾಯಿ ಹಾಗೂ ಹಿರಿಯ ಸಹೋದರಿ ಇದ್ದ ಸಂದರ್ಭದಲ್ಲಿ ಸಮನ್ವಿ ಸ್ನಾನಕ್ಕೆಂದು ಕೋಣೆಗೆ ತೆರಳಿದ್ದರು. ಬಹಳ ಸಮಯವಾದರೂ ಹೊರಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮನೆಯವರು ಕೋಣೆಯ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಸಮನ್ವಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗದ ಕಾರಣ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸಮನ್ವಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.













