ತರಗತಿ ಕೊಠಡಿಗಳಲ್ಲಿ ಸಮವಸ್ತ್ರ ಸಂಹಿತೆಗೆ ಆದ್ಯತೆ ನೀಡಬೇಕು: ಆದೇಶ ಮರುಪರಿಶೀಲನೆಗೆ ರಘುಪತಿ ಭಟ್ ಆಗ್ರಹ
ಉಡುಪಿ: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರದ ಜತೆಗೆ ಹಿಜಾಬ್ ಸೇರಿದಂತೆ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಅವಕಾಶ ನೀಡಿರುವ ಸರ್ಕಾರದ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಮಾಜಿ ಶಾಸಕರಾದ ರಘುತಪಿತ ಭಟ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ಹಾಗೂ ಸಾಂವಿಧಾನಿಕ ಮೌಲ್ಯಗಳ ವೃದ್ಧಿಗೆ ಪೂರಕವಾಗಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನಾರ್ಜನೆಯೇ ಮುಖ್ಯ ಉದ್ದೇಶವಾಗಿದ್ದು, ವಿದ್ಯಾರ್ಥಿಗಳ ನಡುವೆ ಯಾವುದೇ ರೀತಿಯ ತಾರತಮ್ಯ ಅಥವಾ ಗೊಂದಲ ಉಂಟಾಗುವಂತಹ ವಿಚಾರಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಸಮಾನತೆಯ ದೃಷ್ಟಿಯಿಂದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತರಗತಿ ಕೊಠಡಿಗಳಲ್ಲಿ ಏಕರೀತಿಯಲ್ಲಿ ಕಾಣುವಂತೆ ಸಮವಸ್ತ್ರ ಸಂಹಿತೆಗೆ ಆದ್ಯತೆ ನೀಡಬೇಕು. ತರಗತಿ ಕೊಠಡಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಸಮವಸ್ತ್ರ ಸಂಹಿತೆಯನ್ನು ಮೀರಬಾರದು ಎಂಬುದು ಸಮಾಜದ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಶಾಲಾ ಶಿಕ್ಷಣ ಇಲಾಖೆ ತರಗತಿ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಇದೀಗ ಹಿಜಾಬ್ ಸೇರಿದಂತೆ ಸಾಂಪ್ರದಾಯಿಕ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿರುವುದನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದವನ್ನು ಉಲ್ಲೇಖಿಸಿದ ಅವರು, ಆರಂಭದಲ್ಲಿ ಸಮವಸ್ತ್ರ ಸಂಹಿತೆಯನ್ನು ಪಾಲಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ನಂತರ ತರಗತಿ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ವಿವಾದ ಸೃಷ್ಟಿಸಿದ್ದರು. ಇದರಿಂದ ರಾಜ್ಯ ಹಾಗೂ ದೇಶಾದ್ಯಂತ ಗೊಂದಲ ಉಂಟಾಗಿ ಶಿಕ್ಷಣ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಯಿತು ಎಂದು ಹೇಳಿದ್ದಾರೆ.
ಕೆಲವು ಮತೀಯವಾದಿ ಸಂಘಟನೆಗಳು ಈ ವಿವಾದವನ್ನು ಬಳಸಿಕೊಂಡು ಶಾಂತಿ ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ಮಾಡಿದ್ದವು. ಈ ಹಿಂದೆ ಕೂಡ ತರಗತಿ ಕೊಠಡಿಗಳಲ್ಲಿ ಸಮವಸ್ತ್ರ ಸಂಹಿತೆ ಪಾಲನೆ ಆಗಬೇಕು ಎಂದು ನಾನು ಒತ್ತಾಯಿಸಿದ್ದೆ, ಇಂದಿಗೂ ಅದೇ ನಿಲುವಿಗೆ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಶಾಲಾ ಆವರಣ, ಕ್ಯಾಂಪಸ್ ಹಾಗೂ ಕಾರಿಡಾರ್ಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇರಬಹುದು. ಆದರೆ ತರಗತಿ ಕೊಠಡಿ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಮವಸ್ತ್ರವನ್ನೇ ಕಡ್ಡಾಯಗೊಳಿಸಿ ಎಲ್ಲ ವಿದ್ಯಾರ್ಥಿಗಳು ಸಮಾನವಾಗಿ ಕಾಣುವಂತಿರಬೇಕು. ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟಾಗದಂತೆ ಸಮವಸ್ತ್ರ ಸಂಹಿತೆಗೆ ಆದ್ಯತೆ ನೀಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.













