ಉಪ್ಪಿನಂಗಡಿ| ದರೋಡೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೈಲುಶಿಕ್ಷೆ, ದಂಡ
ಉಪ್ಪಿನಂಗಡಿ: ಇಳಂತಿಲ ಗ್ರಾಮದಲ್ಲಿ 2023ರ ಮಾ.20ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಇಳಂತಿಲ ನಿವಾಸಿ ರಾಜೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಾಫ ಎಂಬವರಿಗೆ ನ್ಯಾಯಾಲಯ ಮೂರು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮುಹಮ್ಮದ್ ಕೆ. ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ ರೂ.ವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅದನ್ನು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ತುಂಬಿಸಿ ದ್ವಿಚಕ್ರ ವಾಹನದಲ್ಲಿ ತನ್ನ ಹೆಂಡತಿ ಮೈಮೂನಾರೊಂದಿಗೆ ಉಪ್ಪಿನಂಗಡಿಗೆ ಚಿನ್ನಾಭರಣ ಖರೀದಿಗೆಂದು ಬರುತ್ತಿದ್ದರು. ದಾರಿ ಮಧ್ಯೆ ಇವರಿಗೆ ಸರಳಿಕಟ್ಟೆಯ ಕಂಪ್ಲೋಡಿ ಎಂಬಲ್ಲಿರುವ ತನ್ನ ಅತ್ತೆ ಮರಣ ಹೊಂದಿರುವ ಮಾಹಿತಿ ತಿಳಿದು ಬಂದಿದ್ದು, ಮುಹಮ್ಮದ್ ಅವರು ದ್ವಿಚಕ್ರ ವಾಹನವನ್ನು ತಿರುಗಿಸಿ, ಪೆದಮಲೆಯಿಂದ ಸರಳಿಕಟ್ಟೆ ರಸ್ತೆಯಲ್ಲಿ ತನ್ನ ಅತ್ತೆಯ ಮರಣ ನೋಡಲೆಂದು ತೆರಳಿದ್ದರು. ಮಧ್ಯಾಹ್ನ ಸುಮಾರು 1.30ಕ್ಕೆ ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಇವರ ಹೆಂಡತಿ ದ್ವಿಚಕ್ರ ವಾಹನದಿಂದ ಆಯತಪ್ಪಿ ರಸ್ತೆಗೆ ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಅದೇ ದಾರಿಯಲ್ಲಿ ಬರುತ್ತಿದ್ದ ಅಟೋ ರಿಕ್ಷಾವೊಂದರಲ್ಲಿ ಕುಳ್ಳಿರಿಸಿ, ದ್ವಿಚಕ್ರ ವಾಹನದಲ್ಲಿದ್ದ ಹಣದ ಕಟ್ಟನ್ನು ಹಿಡಿದುಕೊಂಡು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ ವಾಪಸ್ ಅಟೋ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಹೆಂಡತಿಯನ್ನು ಮನೆಗೆ ಬಿಟ್ಟು, ಬಳಿಕ ಅದೇ ರಿಕ್ಷಾದಲ್ಲಿ ಮುಹಮ್ಮದ್ ಅವರು ಹಣದ ಕಟ್ಟನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ತನ್ನ ದ್ವಿಚಕ್ರ ವಾಹನ ಇದ್ದ ಸ್ಥಳಕ್ಕೆ ಅಪರಾಹ್ನ 3 ಗಂಟೆಯ ಸುಮಾರಿಗೆ ತಲುಪಿದ್ದರು. ರಿಕ್ಷಾದ ಬಾಡಿಗೆ ನೀಡಿದ ಅವರು ಬಳಿಕ ತನ್ನ ದ್ವಿಚಕ್ರ ವಾಹನದ ಬಳಿ ಬಂದು ಅದರ ಸೀಟಿನ್ನೆತ್ತಿ ಹಣದ ಕಟ್ಟನ್ನು ಅದರಲ್ಲಿ ಇಡುತ್ತಿದ್ದಂತೆಯೇ ಮುಹಮ್ಮದ್ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊಂಡು ಓಡಿ ಹೋಗಿದ್ದ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕರಾಗಿದ್ದ ರವಿ ಬಿ.ಎಸ್. ಅವರು ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದು, ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ, ಆರೋಪಿಗಳಾದ ಬೆಳ್ತಂಗಡಿ ಇಳಂತಿಲ ನಿವಾಸಿ ರಾಜೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಫಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪಿ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮನು ಬಿ.ಕೆ. ರವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೂ ತಲಾ 10,000 ರೂ. ದಂಡ ಮತ್ತು 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ನೀಡಿ ಅದೇಶಿಸಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕರಾದ ದಿವ್ಯರಾಜ ಹೆಗ್ಡೆರವರು ಈ ಪ್ರಕರಣಕ್ಕೆ ಸಂಬಂಧಿಸಿ ವಾದ ಮಂಡಿಸಿರುತ್ತಾರೆ.













