ಬೆಣ್ಣೆಕುದ್ರು ಅಣೆಕಟ್ಟಿನಿಂದ 12 ಗ್ರಾಮಗಳ ಜನರಿಗೆ ಸಮಸ್ಯೆ ಕುರಿತು ಗ್ರಾಮಸ್ಥರಿಂದ ದೂರು: ವರದಿ ಕೇಳಿದ ಸಚಿವ ಭೋಸರಾಜು

Spread the love

ಬೆಣ್ಣೆಕುದ್ರು ಅಣೆಕಟ್ಟಿನಿಂದ 12 ಗ್ರಾಮಗಳ ಜನರಿಗೆ ಸಮಸ್ಯೆ ಕುರಿತು ಗ್ರಾಮಸ್ಥರಿಂದ ದೂರು: ವರದಿ ಕೇಳಿದ ಸಚಿವ ಭೋಸರಾಜು

ಉಡುಪಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ-ಮೂಡುಹಡು ಮತ್ತು ಬಾರಕೂರು-ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟನ್ನು ಒಟ್ಟು ಸುಮಾರು 311 ಕೋಟಿ ವೆಚ್ಚದಲ್ಲಿ ನಿರ್ಮಿ ಸಿದ್ದು, ಇದರಿಂದ ಅಣೆಕಟ್ಟು ಕೆಳಗಿನ ಸುಮಾರು 12 ಗ್ರಾಮಗಳ ಜನತೆಗೆ ಭಾರೀ ಸಮಸ್ಯೆಯಾಗುವ ಕುರಿತು ಕೇಳಿಬಂದ ದೂರಿಗೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸಣ್ಣ ನೀರಾವರಿ ಸಚಿವ ಎಸ್.ಭೋಸರಾಜು ಅವರು ಗ್ರಾಮಸ್ಥರ ಮನವಿಯನ್ನು ಖುದ್ದಾಗಿ ಆಲಿಸಿದರು.

ಇಲ್ಲಿ ಯಾಕಾಗಿ ಅಣ್ಣೆಕಟ್ಟನ್ನು, ಯಾರ ಒಳಿತಿಗಾಗಿ ನಿರ್ಮಿಸಲಾಗಿದೆ. ಇದಕ್ಕೆ ಕಾರಣರು ಯಾರು. ಇದರಿಂದ ಪ್ರಯೋಜನ ಪಡೆಯುವವರು ಯಾರು. ಈ ಅಣೆಕಟ್ಟಿನಿಂದ ತೊಂದರೆಗೊಳಗಾಗುವ ಜನರ ಅಹವಾಲು ಗಳೇನು. ಅವರ ದೂರಿನಲ್ಲಿ ಸತ್ಯಾಂಶ ಎಷ್ಟಿದೆ ಮುಂತಾದ ವಿಷಯಗಳ ಕುರಿತು ಸಮಗ್ರವಾದ ವರದಿಯೊಂದನ್ನು ತನಗೆ ಸಲ್ಲಿಸುವಂತೆ ಸಚಿವರು ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಶ್ರೀಹರಿಪ್ರಕಾಶ್ ಅವರಿಗೆ ಸೂಚಿಸಿ, ಒಂದು ವಾರದೊಳಗೆ ವರದಿ ಸಿದ್ಧಪಡಿಸಿ ತನಗೆ ನೀಡುವಂತೆ ಸೂಚಿಸಿದರು.

ಈ ಅಣೆಕಟ್ಟು ನಿರ್ಮಾಣದಿಂದ ತೀವ್ರವಾದ ಉಪ್ಪು ನೀರಿನ ಸಮಸ್ಯೆಗೆ ಸಿಲುಕುವ ಸೂಲ್ಕುದ್ರು, ಮೂಡಹಡು, ಪಾಂಡೇಶ್ವರ, ಐರೋಡಿ ಮುಂತಾದ 12 ಗ್ರಾಮದ 4000ಕ್ಕೂ ಅಧಿಕ ಜನರು ತೊಂದರೆಗೊಳಗಾಗಲಿದ್ದಾರೆ ಎಂದು ಸೇರಿದ ಗ್ರಾಮಸ್ಥರು ಸಚಿವರಿಗೆ ದೂರು ನೀಡಿದರು.

ಗ್ರಾಮಸ್ಥರ ಪರವಾಗಿ ಮಾತನಾಡಿದ ಸೂಲ್ಕುದ್ರು ಗ್ರಾಮ ಹಿತರಕ್ಷಣ ಸಮಿತಿಯ ಜೇಮ್ಸ್ ಒಲಿವರ್ ಅವರು, ಯೋಜನೆಯ ಸುದ್ದಿ ತಿಳಿದಾಗಿನಿಂದ ನಾವು ಈ ವಿಷಯವನ್ನು ಸಂಬಂಧಿತ ಗಮನಕ್ಕೆ ತರಲು ಹೋರಾಡುತಿದ್ದೇವೆ. ಈಗ 300 ಕೋಟಿ ರೂ.ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಗೊಂಡಿರು ವುದರಿಂದ ಇದಕ್ಕೆ ಹಲಗೆ ಹಾಕುವ ಮುನ್ನ ನಮ್ಮೆಲ್ಲಾ ಗ್ರಾಮಗಳಲ್ಲಿ ನದಿ ಬದಿ ತಡೆಗೋಡೆ ನಿರ್ಮಿಸಬೇಕೆಂಬುದು ನಮ್ಮ ಈಗಿನ ಬೇಡಿಕೆಯಾಗಿದೆ ಎಂದರು.

ಇಲ್ಲದಿದ್ದರೆ ಅಣೆಕಟ್ಟಿನಿಂದ ಉಪ್ಪು ನೀರು ಇಲ್ಲಿರುವ ಮೂರು ಕುದ್ರು ಹಾಗೂ ನದಿ ಬದಿ ಪ್ರದೇಶಗಳಿಗೆಲ್ಲಾ ನುಗ್ಗಿ ನಮಗೆ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರು. ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿದಾಗ, ಇಲ್ಲಿ ಒಂದೂವರೆ ಅಡಿ ನೀರು ಏರಲಿದೆ ಎಂದು ಇಂಜಿನಿಯರ್ ಹೇಳುತ್ತಾರೆ. ಹಾಗಾದರೆ ನಮ್ಮ ಕುದ್ರುಗಳೆಲ್ಲಾ ಉಪ್ಪುನೀರಿನಲ್ಲಿ ಮುಳುಗುತ್ತದೆ. ಅದನ್ನು ತಡೆಯಲು ಆರು ಅಡಿ ಎತ್ತರದ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಉಚ್ಚರಿಸಿದ ಸಚಿವರು ಪ್ರಪಂಚದ ಯಾವುದೇ ಪ್ರದೇಶದಲ್ಲಾದರೂ 24 ಕಿ.ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಿದ್ದನ್ನು ಕೇಳಿದ್ದೀರಾ. ಇದು ಅಸಾಧ್ಯ ಮಾತು. ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂಬುದನ್ನು ಪರಿಶೀಲಿಸಿ ಮುಖ್ಯ ಇಂಜಿನಿಯರ್ ವರದಿ ನೀಡುತ್ತಾರೆ. ಸರಕಾರದ ಮುಂದೆ ಏನು ಮಾಡಬೇಕು ಎಂಬುದನ್ನು ಸಹ ಅವರು ಸೂಚಿಸುತ್ತಾರೆ. ಅದರಂತೆ ನಾವು ಕಾರ್ಯೋನ್ಮುಖರಾಗುತ್ತೇವೆ ಎಂದರು.

ನಮಗೆ ಅಣೆಕಟ್ಟಿಗಿಂತಲೂ ಕೆಳಗಿನ ಭಾಗ 10-12 ಗ್ರಾಮಗಳ ಸಾವಿರಾರು ಮಂದಿ ಗ್ರಾಮಸ್ಥರ ಹಿತಾಸಕ್ತಿ ಮುಖ್ಯವಾಗುತ್ತದೆ. ಹೀಗಾಗಿ ಅಣೆಕಟ್ಟು ನಿಂತರೂ ಚಿಂತೆ ಎಲ್ಲ ಎಂದರು.

ಅಣೆಕಟ್ಟಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.


Spread the love
Subscribe
Notify of

0 Comments
Inline Feedbacks
View all comments