ಕರಾವಳಿ ಜಿಲ್ಲೆಯ ಮೀನುಗಾರರ ಅಂತರಾಜ್ಯ ಮೀನುಗಾರಿಕಾ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಭೇಟಿ ಮಾಡಿದ ಯಶ್ಪಾಲ್ ಸುವರ್ಣ

Spread the love

ಕರಾವಳಿ ಜಿಲ್ಲೆಯ ಮೀನುಗಾರರ ಅಂತರಾಜ್ಯ ಮೀನುಗಾರಿಕಾ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಭೇಟಿ ಮಾಡಿದ ಯಶ್ಪಾಲ್ ಸುವರ್ಣ

ಕರ್ನಾಟಕ ಕರಾವಳಿ ಜಿಲ್ಲೆಯ ಮೀನುಗಾರರು ಅಂತಾರಾಜ್ಯ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವರಾದ ನಿತೇಶ್ ರಾಣೆಯವರನ್ನು ಅವರ ಸಚಿವಾಲಯದ ಕಚೇರಿಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭೇಟಿಯಾಗಿ ಮಾತುಕತೆ ನಡೆಸಿದರು.

ಕರ್ನಾಟಕ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಅಂತಾರಾಜ್ಯ ಭಾಗದಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಸಮನ್ವಯತೆ ಹಾಗೂ ಮಾಹಿತಿ ಕೊರತೆಯಿಂದ ನಿಗದಿತ ವ್ಯಾಪ್ತಿಯನ್ನು ಮೀರಿದಾಗ ಮಹಾರಾಷ್ಟ ಮೀನುಗಾರಿಕಾ ಇಲಾಖೆ ಕೇಸುಗಳನ್ನು ದಾಖಲಿಸಿ, ಅಪಾರ ಪ್ರಮಾಣದ ದಂಡ ಹಾಕುವ ಪ್ರಕರಣಗಳು ನಡೆಯುತ್ತಿದ್ದು ಇದರಿಂದ ಕರಾವಳಿ ಕರ್ನಾಟಕದ ಮೀನುಗಾರರು ತೀವ್ರ ಸಮಸ್ಯೆ ಎದುರಿಸುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ ಇಂತಹ ಪ್ರಕರಣಗಳನ್ನು ಕೈಬಿಟ್ಟು ಮೀನುಗಾರರಿಗೆ ಸಹಾಯ ಮಾಡುವಂತೆ ಶಾಸಕ ಯಶ್ ಪಾಲ್ ಸುವರ್ಣ ಸಚಿವರಿಗೆ ಮನವಿ ಮಾಡಿದರು.

ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ಸಮನ್ವಯತೆ ಸಾಧಿಸಲು ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ತರಲು ಸಹಕಾರ ನೀಡುವ ಜೊತೆಗೆ ಎಲ್ಲಾ ರಾಜ್ಯಗಳ ಮೀನುಗಾರಿಕಾ ಸಚಿವರು ಹಾಗೂ ಮೀನುಗಾರ ಮುಖಂಡರನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಮಾಡುವ ನಿಟ್ಟಿನಲ್ಲಿ ಕೈಜೋಡಿಸುವಂತೆ ಮನವಿ ಮಾಡಿ ಈಗಾಗಲೇ ಗೋವಾ ಸರ್ಕಾರದ ಮೀನುಗಾರಿಕಾ ಸಚಿವರೊಂದಿಗೆ ಚರ್ಚೆ ನಡೆಸಿರುವುದಾಗಿ ಮಾಹಿತಿ ನೀಡಿದರು.

ಏಷ್ಯಾದಲ್ಲೇ ಅತೀ ದೊಡ್ಡ ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಬೋಟ್ ಗಳು ದೇಶದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಅಧುನಿಕ ತಂತ್ರಜ್ಞಾನದ ಮೂಲಕ ಮೀನುಗಾರಿಕೆ ನಡೆಸುತ್ತಿದ್ದು, ಮಹಾರಾಷ್ಟ್ರದ ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಮಲ್ಪೆಗೆ ಭೇಟಿ ನೀಡುವಂತೆ ಸಚಿವ ನಿತೇಶ್ ರಾಣೆಯವರಿಗೆ ಶಾಸಕ ಯಶ್ ಪಾಲ್ ಸುವರ್ಣ ಆಹ್ವಾನಿಸಿದರು.

ಯಶ್ ಪಾಲ್ ಸುವರ್ಣ ಅವರ ಮನವಿಗೆ ಸ್ಪಂದಿಸಿದ ಸಚಿವ ನಿತೇಶ್ ರಾಣೆ ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿ, ರಾಷ್ಟ್ರೀಯ ಮೀನುಗಾರಿಕಾ ನೀತಿಯ ಬಗ್ಗೆ ಸಹಮತ ಸೂಚಿಸಿ, ಅಂತಾರಾಜ್ಯ ಮೀನುಗಾರಿಕಾ ಸಮನ್ವಯ ಸಮಿತಿ ರಚನೆಗೆ ವಿಶೇಷ ಮುತುವರ್ಜಿ ವಹಿಸುವ ಭರವಸೆ ನೀಡಿ, ಮಲ್ಪೆ ಬಂದರಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಂಬೈ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಶ್ರೀ ಅರವಿಂದ ಶೆಟ್ಟಿ, ಉದ್ಯಮಿಗಳಾದ ಶ್ರೀ ರಾಜೇಶ್ ಕುಂದರ್, ಶ್ರೀ ಕಿಶನ್ ಶೆಟ್ಟಿ, ಶ್ರೀ ಅಮಿತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments