ಐಸ್ ಕ್ರೀಂ ಕೊಡಿಸುವ ನೆಪದಲ್ಲಿ ಮಕ್ಕಳನ್ನು ಅಬುದಾಭಿಗೆ ಕರೆದೊಯ್ದ ಅಪ್ಪ ಸಹಾಯಕ್ಕಾಗಿ ಅಂಗಲಾಚುತ್ತಿರುವ ಅಮ್ಮ
ಉಡುಪಿ: ‘ನನಗೆ ಹೇಳದೆ ಆಟ ಆಡುತ್ತಿದ್ದ ನನ್ನ ಹಾಲು ಕುಡಿಯುವ ಮಗು ಸೇರಿದಂತೆ ಇಬ್ಬರು ಮಕ್ಕಳನ್ನು ಐಸ್ಕ್ರೀಂ ಕೊಡಿಸುವ ನೆಪದಲ್ಲಿ ಬಲಾತ್ಕಾರವಾಗಿ ಅಬುಧಾಬಿಗೆ ಕರೆದೊಯ್ದ ಪತಿ ಮುಹಮ್ಮದ್ ಶಾನಿಬ್(35) ನಿಂದ ನನ್ನ ಮಕ್ಕಳಿಬ್ಬರನ್ನು ವಾಪಾಸ್ಸು ತಂದು ಕೊಡಿ’ ಎಂದು ಬಾಣಂತಿ ಉಳ್ಳಾಲದ ರಿಶಾನಾ ನಿಲೋಫರ್ (27) ಅಂಗಲಾಚಿ ಬೇಡಿಕೊಂಡಿದ್ದಾರೆ.

ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೂಲಕ ಉಡುಪಿ ಕುಂಜಿಬೆಟ್ಟು ಕಾನೂನು ಮಹಾವಿದ್ಯಾಲಯದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತನ್ನ 40 ದಿನದ ಮೂರನೆ ಹಸುಗೂಸನ್ನು ಹಿಡಿದುಕೊಂಡು ಬಂದಿರುವ ರಿಶಾನಾ, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಪ್ರಕರಣದ ಕುರಿತು ವಿವರ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನ್ಭಾಗ್, ಈ ಬಗ್ಗೆ ಪೊಲೀಸ್ ಠಾಣೆ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಿಂದ ಯಾವುದೇ ನ್ಯಾಯ ದೊರೆಯದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ವರದಿ ಸಲ್ಲಿಸಲಾಗಿದೆ. ಇಲ್ಲಿಯೂ ಸರಿಯಾಗಿ ನ್ಯಾಯ ಸಿಗದಿದ್ದರೆ ಮುಂದೆ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದೆರಡು ತಿಂಗಳಿಂದ ತನ್ನಿಂದ ಸೆಳೆದೊಯ್ದ ಎಳೆಯ ಕಂದಮ್ಮಗಳಿಗಾಗಿ ಪರಿತಪಿಸುತ್ತಿರುವ ಉಳ್ಳಾಲದ ರಿಶಾನಾ ನಿಲೋಫರ್ ಇದೀಗ ತನ್ನ ಮಾನಸಿಕ, ದೈಹಿಕ ಸಮತೋಲನವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾಳೆ. ಗಲ್ಫ್ನ ಅಬುದಾಬಿಯಿಂದ ಬಂದಿದ್ದ ಆಕೆಯ ಗಂಡ ಮಹಮ್ಮದ್ ಶಾನಿಬ್ ಆಕೆಗೆ ಹೇಳದೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳಿಬ್ಬರನ್ನೂ ಐಸ್ಕ್ರೀಂ ಕೊಡಿಸುವ ನೆಪದಲ್ಲಿ ಕರೆದೊಯ್ದು, ಅಂದೇ ರಾತ್ರಿ ವಿಮಾನದಲ್ಲಿ ಅಬುದಾಭಿಗೆ ಮಕ್ಕಳ ಸಹಿತ ಪರಾರಿಯಾಗಿದ್ದಾನೆ. ಮೊದಮೊದಲು ಫೋನಿನ ಮೂಲಕವಾದರೂ ಸಂಪರ್ಕದಲ್ಲಿದ್ದ ಆಕೆಯ ಗಂಡ ಇದೀಗ ಮಾವುದೇ ರೀತಿಯಲ್ಲಿ sಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಕೂಡಲೇ ಭಾರತ ಸರಕಾರದ ರಾಜತಾಂತ್ರಿಕ ವ್ಯವಸ್ಥೆಯ ಮೂಲಕ ಮಕ್ಕಳಿಬ್ಬರನ್ನೂ ಕರೆತರದಿದ್ದಲ್ಲಿ ಈಗಾಗಲೇ ಖಿನ್ನತೆಯಿಂದ ಬಳಲುತ್ತಿರುವ ರಿಶಾನಾಳ ಜೀವಕ್ಕೂ ಗಂಭೀರ ಅಪಾಯವಾಗುವ ಸಾಧ್ಯತೆ ಇದೆ.
ಪ್ರತಿಷ್ಠಾನಕ್ಕೆ ದೂರು
ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಛೇರಿಗೆ ಕೈಯಲ್ಲಿ 20 ದಿನಗಳ ಮೂರನೇ ಮಗುವನ್ನು ಹಿಡಿದುಕೊಂಡು ರಿಶಾನಾ ಬಂದಿದ್ದಳು. ಬಂದವಳೇ ಕಣ್ಣೀರು ಸುರಿಸುತ್ತಾ “ಏನಾದರೂ ಮಾಡಿ ತನ್ನ ಮಕ್ಕಳಿಬ್ಬರನ್ನೂ ತರಿಸಿಕೊಡಿ ಸರ್” ಎಂದು ಅಂಗಲಾಚಿದಳು.
ಆಕೆಯನ್ನು ಸಮಾಧಾನ ಪಡಿಸಿ, ಎಲ್ಲಾ ವಿವgಗಳನ್ನು ಸಂಗ್ರಹಿಸಿದೆವು. ಇವೆಲ್ಲ ಸಾಮಾಜಿಕ ಸಮಸ್ಯೆಗಳಾಗಿದ್ದು ಯಾವ ಕಾರಣಕ್ಕೂ ಕುಟುಂಬದ ಜಗಳಗಳು ರಸ್ತೆಗೆ ಬರಬಾರದು ಎಂದು ಸಮಾಧಾನ ಪಡಿಸಿ ಊರ ಜಮಾತಿನ ಹಾಗೂ ಗಣ್ಯರ ನೆರವಿನಿಂಲೇ ಸಮಸ್ಯೆಯನ್ನು ಪರಿಹರಿ¸ಬೇಕೆಂದು ಸೂಚಿಸಿದೆವು. ಆದರೂ ಎಳೆಯ ಮಕ್ಕಳೀರ್ವರನ್ನು ಹೊರದೇಶಕ್ಕೆ ಸಾಗಿಸಿರುವುದು ಗಂಭೀರ ಅಪರಾಧವಾಗಿರುವುದರಿಂದ ಅವಶ್ಯವಾಗಿ ಪೋಲೀಸರಿಗೆ ದೂರು ನೀಡಲು ಸೂಚಿಸಿದೆವು.
ಎಂಟು ವರ್ಷಗಳ ಹಿಂದೆ ನಡೆದ ಮದುವೆ: ಮಂಗಳೂರು ತಾಲೂಕು ಪೆರ್ಮನ್ನೂರು ನಿವಾಸಿ ಖ್ಯಾತ ಉಧ್ಯಮಿ ಶ್ರೀ ಸಿದಿಯಬ್ಬನವರ ಮಗಳು ಎಂಟು ವರ್ಷಗಳ ಹಿಂದೆ ಕುಂಬಳೆಯ ಇಂಜನಿಯರ್ ಮಹಮ್ಮದ್ ಶಾನಿಬ್ರೊಂದಿಗೆ ವಿವಾಹವಾಗಿದ್ದಳು. ಉಭಯ ಕುಟುಂಬಸ್ಥರ ಒಪ್ಪಿಗೆಯಿಂದ ಹಾಗೂ ಜಮಾತ್ ಹಿರಿಯರ ಉಪಸ್ಥಿತಿಯಲ್ಲಿ ನಡೆದ ಈ ಮದುವೆಯ ಸಮಯದಲ್ಲಿ ಗಂಡಿನ ಕಡೆಯ ಅಪೇಕ್ಷೆಯಂತೆ 130 ಪವನ್ ಚಿನ್ನ ಹಾಗೂ ಮಂಗಳೂರಿನ ವಸತಿ ಸಮುಚ್ಚಯದಲ್ಲಿ ಫ್ಲಾಟ್ ಒಂದನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಮೊದಲಿಂದಲೂ ಹಿಂಸೆ ಅನುಭವಿಸಿದ ರಿಶಾನಾ: “ಮದುವೆಯಾದ ಹೊಸದರಲ್ಲಿ ಉಡುಪಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮಹಮ್ಮದ್ ಶಾನಿಬ್ ಹಾಗೂ ಅವರ ತಾಯಿ ಯಾವತ್ತೂ ನನ್ನನ್ನು ಗೌರವದಿಂದ ಕಾಣಲಿಲ್ಲ. ನಾನು ಅಶಿಕ್ಷಿತೆ ಎಂದು ಮೂದಲಿಸುತ್ತ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುತ್ತಲೇ ಬಂದಿದ್ದರು. ನನ್ನ ಹಾಗೂ ಮಕ್ಕಳ ಕನಿಷ್ಠ ಅವಶ್ಯಕತೆಗಳನ್ನೂ ಪೂರೈಸದಿದ್ದಾಗ ಉಡುವ ಬಟ್ಟೆಯಿಂದ ಹಿಡಿದು ತಿಂಡಿ ತಿನಿಸುಗಳನ್ನೂ ಮಾತಾಪಿತರು ತವರೂರಿನಿಂದ ಪೂರೈಸುತ್ತಿದ್ದರು. ಇಷ್ಟಾದರೂ ಅವನ್ನೆಲ್ಲಾ ಉಪಯೋಗಿಸದಂತೆ ನಿರ್ಬಂಧಿಸಿ ನನ್ನ ಜೀವನವನ್ನೇ ನರಕ ಸದೃಶವಾಗಿಸಿಬಿಟ್ಟರು. ತವರು ಮನೆಯವರು ಹೊಸ ಬಟ್ಟೆಗಳನ್ನು ಕಳುಹಿಸಿದರೂ ಅವನ್ನು ಕೊಡದೇ ನಾದಿನಿಯ ಹಳೆ ಬಟ್ಟೆಗಳನ್ನೇ ತೊಡುವಂತೆ ಮಾಡಿದರು. ಹಸಿವಾದರೂ ಊಟ ಮಾಡಲು ಬಿಡದೇ ಅರ್ಧ ರಾತ್ರಿ ಕಳೆದ ನಂತರ ಮನೆಗೆ ಬರುವ ಗಂಡನ ಊಟವಾದ ಬಳಿಕ ಉಳಿದ ಅಡುಗೆಯನ್ನು ಉಂಡು ಮುಸುರೆ ತಕ್ಕುವಂತೆ ಬಲವಂತ ಪಡಿಸುತ್ತಿದ್ದರು” ಎಂದು ರಿಶಾನಾ ಕಣ್ಣೀರಿಟ್ಟಳು.
ಮುಸ್ಲಿಂ ಸಂಘಟನೆಗಳ ಬೆಂಬಲ: ಇದೇ ವೇಳೆ ಅನೇಕ ಮಹಿಳಾ ಸಂಘಟನೆಗಳು ರಿಶಾನಾಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಉಡುಪಿಯ ಮುಸ್ಲಿಂ ಯುವಕರ ಸಂಘಟನೆ ಸಮ್ಮಾನ್ ಕೌನ್ಸೆಲಿಂಗ್ ಸೆಂಟರಿನವರು ಅಬುದಾಭಿಯಲ್ಲಿರುವ ಕನ್ನಡಿಗ ಸ್ನೇಹಿತರನ್ನು ಸಂಪರ್ಕಿಸಿ ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇದೇ ವೇಳೆ, ಪ್ರತಿಷ್ಠಾನದ ಆಪ್ತ ಸಲಹಾಗಾರರು ರಿಶಾನಾಳನ್ನು ಸಂತೈಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಏನನ್ನುತ್ತಿದೆ ಕಾನೂನು:ಪ್ರತಿಷ್ಠಾನದ ನ್ಯಾಯವಾದಿಗಳ ಸಮಿತಿಯೊಂದು ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಂಡು ತಮ್ಮ ವರದಿಯನ್ನು ನೀಡಿದ್ದಾರೆ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲೂ ಹೆಣ್ಣು ಮಕ್ಕಳು ಪ್ರಾಯಕ್ಕೆ ಬರುವ ತನಕ ತನ್ನತಾಯಿಯ ಆಶ್ರಯದಲೇ ಇರಬೇಕಾಗಿ ವಿಧಿಸಲಾಗಿದೆ. ಒಂದು ವೇಳೆ ಗಂಡ ಹೆಂಡಂದಿರು ಡೈವೋರ್ಸ್ ಪಡೆದು ಕೊಂಡರೂ ಈ ನಿಯಮದಂತೆ ನಡೆದುಕೊಳ್ಳಬೇಕೆಂದು ಶೆರಿಯತ್ ವಿಧಿಸಿದೆ.
ವಿದೇಶಾಂಗ ಸಚಿವಾಲಯಕ್ಕೆ ದೂರು: ಇದೀಗ ತಿಂಗಳೆರಡು ಕಳೆದರೂ ಸಮಸ್ಯೆ ಪರಿಹರಿಸುವಲ್ಲಿ ಸಮಾಜದ ಗಣ್ಯರು ಸಫಲರಾಗಿಲ್ಲ. ಪೋಲೀಸರಿಂದಲೂ ಯಾವ ಕಾರ್ಯಚರಣೆಯೂ ನಡೆದಿಲ್ಲ. ಇದೀಗ ರಿಶಾನಾಳ ಗಂಡ ಅಥವಾ ಅವರ ಕುಟುಂಬದವರು ಯಾವುದೇ ರೀತಿಯ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದುದರಿಂದ ಕಾನೂನು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ನ್ಯಾಯಲಯದಲ್ಲಿ ದೂರು ನೀಡಲು ಈಗಾಗಲೇ ನ್ಯಾಯವಾದಿಗಳನ್ನು ಸಂಪರ್ಕಿಸಲಾಗಿದೆ.
ಈಗಾಗಲೇ ಪ್ರತಿಷ್ಠಾನವು ಭಾರತದ ವಿದೇಶಾಂಗ ಸಚಿವೆ ಶ್ರೀಮತಿ ಸುಶ್ಮಾ ಸ್ವರಾಜ್ರನ್ನು ಸಂಪರ್ಕಿಸಿ ಪ್ರಕರಣದ ಸಂಪೂರ್ಣ ವರದಿಯನ್ನು ಸಲ್ಲಿಸಿದೆ. ಸಂಪೂರ್ಣ ನ್ಯಾಯ ಸಿಗುವ ತನಕ ರಿಶಾನಾಳನ್ನು ಸರ್ವರೀತಿಯಲ್ಲಿ ಬೆಂಬಲಿಸಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬದ್ಧವಾಗಿದೆ ಎಂದು ಶಾನುಭಾಗ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್ನ ಲತೀಫ್, ಸಲಾವುದ್ದೀನ್ ಅಬ್ದುಲ್ಲಾ, ಕಾನೂನು ವಿದ್ಯಾಲಯದ ಪ್ರಾಂಶುಪಾಲ ಪ್ರಕಾಶ್ ಕಣಿವೆ, ನ್ಯಾಯವಾದಿ ವಿಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.













