ಕುಂದಾಪುರ:  ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ: ಇಬ್ಬರು ಆರೋಪಿಗಳ ಬಂಧನ

Spread the love

ಕುಂದಾಪುರ:  ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ: ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ  ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 3 ರಂದು ಸಂಜೆ ಕುಂದಾಪುರ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೀನಾಕ್ಷಿ ಅವರು ಮತ್ತು ಅವರ ಮಗಳು ಜ್ಯೋತಿ ಅವರ ಮೇಲೆ ಈ ದಾಳಿ ನಡೆದಿದೆ. ಬಿ ಎಸ್ ಎನ್ ಎಲ್ ಕಚೇರಿಯ ಹತ್ತಿರ ಇಬ್ಬರು ಯುವಕರು ಬೈಕ್‌ನಲ್ಲಿ ಬಂದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿ ಜಯರಾಮ್ ಡಿ. ಗೌಡ, ಪ್ರಭಾರ ಪೊಲೀಸ್ ನಿರೀಕ್ಷಕರು, ವಿವಿಧ ತಂತ್ರಜ್ಞಾನ ಹಾಗೂ ಮಾಹಿತಿ ಮೂಲಗಳ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಗಳಾದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಸಂಜಯ್ ಎಲ್ (33),  ಮತ್ತು ದಾವಣಗೆರೆ ಜಿಲ್ಲೆ ವಿನೋಬ ನಗರ ನಿವಾಸಿ ವಸಂತ ಕುಮಾರ್ (30), ಇವರನ್ನು ಕ್ರಮವಾಗಿ ತೀರ್ಥಹಳ್ಳಿ ಮುಡಬಾ ಕ್ರಾಸ್ ಹಾಗೂ ಮಲೆ ಬೆನ್ನೂರು (ದಾವಣಗೆರೆ) ಪ್ರದೇಶಗಳಲ್ಲಿ ಬಂಧಿಸಿದ್ದಾರೆ.

ಪೊಲೀಸರು ಆರೋಪಿಗಳಿಂದ ಚಿನ್ನದ ಕರಿಮಣಿ ಸರ (ಮೌಲ್ಯ ರೂ. 3,00,000), ಸ್ಕಾರ್ಪಿಯೋ ಕಾರು, ಹಾಗೂ ಮೋಟಾರ್ ಸೈಕಲ್ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ರೂ. 8.20 ಲಕ್ಷ ಆಗಿದೆ.

ಈ ಕಾರ್ಯಾಚರಣೆಯಲ್ಲಿ ಕುಂದಾಪುರ ವೃತ್ತದ ಉಪಪೊಲೀಸ್ ಅಧೀಕ್ಷಕ ಎಚ್.ಡಿ. ಕುಲಕರ್ಣಿ ಹಾಗೂ ಉಡುಪಿ ಉಪಪೊಲೀಸ್ ಅಧೀಕ್ಷಕ ಡಿ.ಟಿ. ಪ್ರಭು ಅವರ ಮಾರ್ಗದರ್ಶನದಡಿ, ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ನೇತೃತ್ವದಲ್ಲಿ ಪಿ.ಎಸ್‌.ಐ. ನಂಜಾನಾಯ್ಕ್ ಎನ್, ಪುಷ್ಪಾ, ಸಂಚಾರ ಠಾಣೆಯ ಪಿ.ಎಸ್‌.ಐ. ನೂತನ, ಎ.ಎಸ್‌.ಐ. ಮೋನ ಪೂಜಾರಿ, ಹೆಡ್‌ ಕಾನ್ಸ್ಟೇಬಲ್‌ಗಳು ಮೋಹನ್, ಸಂತೋಷ, ಪ್ರಿನ್ಸ್, ಮಂಜುನಾಥ, ಕಾನ್ಸ್ಟೇಬಲ್‌ಗಳು ಘನಶ್ಯಾಮ, ಲೋಹಿತ್, ಮೌನೇಶ್, ಕಿಶನ್, ರಾಜು ಭೋವಿ, ಮಹಾಬಲ, ರಾಘವೇಂದ್ರ ಗೌತಮ್, ನಾಗಶ್ರೀ, ಹಾಗೂ ವೃತ್ತ ಕಚೇರಿಯ ಅಣ್ಣಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments